×
Ad

ವಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆ ಕೆರೆ ಸಂರಕ್ಷಣೆ ಪ್ರಾಧಿಕಾರ ವಿಧೇಯಕ ಅಂಗೀಕಾರ

Update: 2025-08-20 18:49 IST

ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು

ಬೆಂಗಳೂರು: ಬುಧವಾರದಂದು ವಿಧಾನ ಪರಿಷತ್‍ನಲ್ಲಿ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆಯೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು. ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದು, ಪರಿಷತ್ತಿನಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಮಂಡಿಸಿದರು.

ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವು ಜಾರಿಗೆ ಬರುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದನ್ನು ನಾವು ಸಾರ್ವಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿ ಮಾಡಿದ್ದೇವೆ. ಇದರಲ್ಲಿ ಖಾಸಗಿಯವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಪ್ರತಿಯೊಂದು ಗ್ರಾಮದಲ್ಲಿ ಕೆರೆಗಳ ಸಂರಕ್ಷಣೆಗೆ ಸಮಿತಿಯನ್ನು ರಚಿಸಿದ್ದೇವೆ. ಇದಕ್ಕೆ ಬೇಕಾದ ಸದಸ್ಯರನ್ನು ಅವರೇ ನೇಮಕ ಮಾಡಿಕೊಳ್ಳುತ್ತಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಸರಕಾರ ಕೆರೆ ಸಂರಕ್ಷಣೆ ಮಾಡಲು ಬದ್ದವಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ. ರವಿ ಮಾತನಾಡಿ, ಭೂ ಮಾಫಿಯಾ ಒತ್ತಡಕ್ಕೆ ಸರಕಾರ ಮಣಿದಂತೆ ಕಾಣುತ್ತಿದೆ. ನಮ್ಮ ಸರಕಾರ ಇದ್ದಾಗಲೂ ವಿಧೇಯಕ ಜಾರಿ ಮಾಡುವಂತೆ ಒತ್ತಡ ಇತ್ತು. ಈಗಿನ ಸರಕಾರದ ಮೇಲೆ ಅನುಮಾನ ಬರುತ್ತಿದೆ. ಸೂಟ್ ಕೇಸ್‍ಗಳು ಎಲ್ಲಾದರೂ ಕೆಲಸ ಮಾಡಿದ್ದಾವಾ ಎಂಬ ಅನುಮಾನ ಬರುತ್ತಿದೆ. ಹೀಗಾಗಿ ಮತ್ತೊಮೆ ವಿಧೇಯಕವನ್ನು ಪರಾಮರ್ಶೆ ಮಾಡಿ ಜಂಟಿ ಸದನ ಸಮಿತಿಗೆ ವಿಧೇಯಕವನ್ನು ನೀಡಿ ಎಂದು ಒತ್ತಾಯಿಸಿದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರು ಸಮಸ್ಯೆ ಬೇರೆ ಗ್ರಾಮೀಣ ಭಾಗದ ಸಮಸ್ಯೆ ಬೇರೆ, ಬೆಂಗಳೂರು ಕಾಂಕ್ರಿಟ್ ಕಾಡಾಗಿದೆ, ನಾವೂ ಈ ಬಿಲ್ ಸಾರಾಸಗಟಾಗಿ ವಿರೋಧ ಮಾಡುತ್ತಿಲ್ಲ. ಬೆಂಗಳೂರು ಬೆಳೆಯುತ್ತಿರುವ ನಗರ, ಇನ್ನೊಂದು ಸಲ ಪರಿಷ್ಕರಣೆ ಮಾಡಿ, ಇದೇನು ಬಾರೀ ಪ್ರಾಮುಖ್ಯತೆ ಇರುವ ವಿಧೇಯಕವಲ್ಲ. ಸದನ ಸಮಿತಿಗೆ ಇದನ್ನು ಒಪ್ಪಿಸಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News