×
Ad

ಕಾನೂನು ವಿವಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಉಪ ಪ್ರಾಂಶುಪಾಲ ಸೇರಿ ಮೂವರ ಬಂಧನ

Update: 2025-02-18 18:21 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ್ದ ಆರೋಪದಡಿ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಬಸವ ಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ವಿದ್ಯಾರ್ಥಿಗಳಾದ ಜಗದೀಶ್ ಹಾಗೂ ವರುಣ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಜನವರಿ 23ರಂದು ನಿಗದಿಯಾಗಿದ್ದ ಮೊದಲನೆ ಸೆಮಿಸ್ಟರ್ ಕರಾರು ಕಾನೂನು ಭಾಗ-1 ವಿಷಯದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್‍ಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ವಿಶ್ವವಿದ್ಯಾಲಯದ ಪ್ರಮುಖರು ಹಾಗೂ ಜಾಗೃತ ದಳ-2 ಅಧಿಕಾರಿ ವಿಶ್ವನಾಥ್ ಕೆಎನ್ ಎಂಬುವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಠಾಣೆ ಪೊಲೀಸರು ತಾಂತ್ರಿಕ ಸಹಾಯದಿಂದ ಮಾಹಿತಿಗಳನ್ನು ಸಂಗ್ರಹಿಸಿ ಟೆಲಿಗ್ರಾಂ ಗ್ರೂಪ್‍ಗಳ ಮೂಲಕ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನ ಸೋರಿಕೆ ಮಾಡಿದ್ದ ಮೂವರನ್ನು ಬಂಧಿಸಿದ್ದಾರೆ. ಇನ್ನೂ ವಿಚಾರಣೆಯಲ್ಲಿ ಉಪ ಪ್ರಾಂಶುಪಾಲ ನಾಗರಾಜ್ ಅವರ ಮೊಬೈಲ್ ಫೋನ್‍ನಲ್ಲಿದ್ದ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಜಗದೀಶ್, ತನ್ನ ಫೋನ್‍ಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಅವುಗಳನ್ನು ಪರೀಕ್ಷಾರ್ಥಿಗಳಿಗೆ ಸೋರಿಕೆ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ವರುಣ್ ಕುಮಾರ್, ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಕಾನೂನು ವಿದ್ಯಾಲಯವೊಂದರ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಯ ಹಿಂದಿನ ದಿನ ಕಾಲೇಜಿಗೆ ಬಂದ ಪ್ರಶ್ನೆ ಪತ್ರಿಕೆಗಳನ್ನು ಯಾರಿಗೂ ತಿಳಿಯದಂತೆ ತೆರೆದು, ಅದರಲ್ಲಿನ ಪ್ರಶ್ನೆಗಳನ್ನು ತನ್ನ ಮೊಬೈಲ್ ಫೋನ್‍ನಲ್ಲಿ ನಕಲು ಮಾಡಿಕೊಂಡು ಹಣಕ್ಕಾಗಿ ಅವುಗಳನ್ನು ಆನ್‍ಲೈನ್‍ನಲ್ಲಿ ಸೋರಿಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News