×
Ad

ಹರೀಶ್ ಪೂಂಜಾ ತಡೆಯಾಜ್ಞೆ ತೆರವು ಮಾಡಿ ಕಸ್ಟಡಿಗೆ ನೀಡಿ: ಹೈಕೋರ್ಟ್ ಗೆ ಹೊಸ ಅರ್ಜಿ

Update: 2025-07-03 15:58 IST

ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ, ಮುಸ್ಲಿಂ ಸಮುದಾಯವನ್ನು ತುಚ್ಚೀಕರಿಸುವ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರ ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

‘ಕಂತ್ರಿ ಮುಸ್ಲಿಮರನ್ನು ದೇವಸ್ಥಾನದ ಬ್ರಹ್ಮಕಲಶೋತ್ಸವದಿಂದ ದೂರ ಇಡಬೇಕು. ಹಿಂದೂಗಳ ನಡುವೆ ಏಕತೆ ಇರಬೇಕು. ಮುಸ್ಲಿಮರ ಜೊತೆ ಸೌಹಾರ್ದತೆ ಅಲ್ಲ’ ಎಂದು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಷಣ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದು ಕೋಮು ಉದ್ವಿಗ್ನತೆ ಇದ್ದು, ಸೆಕ್ಷನ್ ಜಾರಿಯಲ್ಲಿದ್ದ ದಿನಗಳಲ್ಲೇ ಹರೀಶ್ ಪೂಂಜಾ ಧ್ವೇಷ ಭಾಷಣ ಮಾಡಿ ಗಲಭೆಯನ್ನು ಪ್ರಚೋದಿಸಿದ್ದರು.

‘ನಾನು ಯಾವ ನ್ಯಾಯಾಲಯಕ್ಕೂ ಹೆದರುವುದಿಲ್ಲ’ ಎಂದು ಹೇಳಿದ್ದ ಶಾಸಕ ಹರೀಶ್ ಪೂಂಜಾ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ರದ್ದುಕೋರಿ ಅರ್ಜಿ ಸಲ್ಲಿಸಿ, ಪ್ರಕರಣಕ್ಕೆ ತಕ್ಷಣ ತಡೆಯಾಜ್ಞೆ ನೀಡುವಂತೆ 2025 ಮೇ 04 ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠವು, 2025 ಮೇ 22 ರಂದು ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಇಂದು ಮಸೀದಿ ಅಧ್ಯಕ್ಷ ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ‘ವೆಕೇಟಿಂಗ್ ಸ್ಟೇ’ ಅರ್ಜಿಯನ್ನು ಸಲ್ಲಿಸಿದ್ದಾರೆ. ‘ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿ ಮೇ 22 ರಂದು ವಿಚಾರಣೆ ಬಂದಾಗ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸರ್ಕಾರದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರವರು, ಉಪ್ಪಿನಂಗಡಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಿದ್ದಗೊಳಿಸಿದ್ದಾರೆ ಎಂದು ಹೈಕೋರ್ಟ್ ಗೆ ತಿಳಿಸಿದ್ದರು. ಚಾರ್ಜ್ ಶೀಟ್ ಸಿದ್ದಗೊಂಡಿದ್ದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಅಡ್ಡಿಯಾಗಿದೆ. ಹಾಗಾಗಿ ಚಾರ್ಜ್ ಶೀಟ್ ಸಲ್ಲಿಸಲು ಪೂರಕವಾಗುವಂತೆ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಕೋರಲಾಗಿದೆ. ಅಲ್ಲದೇ, ಪೊಲೀಸರು ಪೂಂಜಾ ವಿರುದ್ಧ ಚಾರ್ಜ್ ಶೀಟ್ ಪೂರ್ಣಗೊಳಿಸಿರುವುದರಿಂದ ಹರೀಶ್ ಪೂಂಜಾ ಹಾಕಿರುವ ಎಫ್ಐಆರ್ ರದ್ದು ಅರ್ಜಿಯನ್ನು ಅನೂರ್ಜಿತಗೊಳಿಸಬೇಕು ಅಥವಾ ತಿದ್ದುಪಡಿ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಬೇಕು. ಹಾಗಾಗಿಯೂ ಕೂಡಾ ಎಫ್ಐಆರ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸುವುದು ಸರಿಯಾದ ಕ್ರಮ ಎಂದು ಕೂಡಾ ಎಸ್ ಬಾಲನ್ ಅರ್ಜಿಯಲ್ಲಿ ವಾದಿಸಿದ್ದಾರೆ.

‘ಅಪರಾಧಕ್ಕೆ ಮೂಲಭೂತ ಹಕ್ಕುಗಳು ಅನ್ವಯವಾಗುವುದಿಲ್ಲ’ (There can be no fundamental rights in a crime) ಎಂದು ವಾದಿಸಿರುವ ಎಸ್ ಬಾಲನ್ ಅವರು, ಹರೀಶ್ ಪೂಂಜಾಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಅವಕಾಶ ಪಡೆದುಕೊಂಡು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಅನ್ನು ಮನವಿ ಮಾಡಿದ್ದಾರೆ. ಹರೀಶ್ ಪೂಂಜಾ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 39/2023(IPC 153, 153-A, 505(1)(3)(c), 505(2), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 57/2024 (IPC 504, 353), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 58/2024(IPC 143, 147, 341, 504, 506 r/w 149), ಬಜ್ಪೆ ಠಾಣೆಯಲ್ಲಿ ಕ್ರೈಂ ನಂ 239/2016 (IPC 143, 147, 290, 160, 504 r/w 149), ಬಂಟ್ವಾಳ ಠಾಣೆಯಲ್ಲಿ ಕ್ರೈಂ ನಂ 117/2017(IPC 142, 143, 188 r/w 149), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 77/2023(IPC 143, 353, 504 r/w 149), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 105/2023 (IPC 504, 505(2) ಎಫ್ಐಆರ್ ಗಳು ದಾಖಲಾಗಿದೆ. ಹೀಗಿದ್ದರೂ ಪುನರಾವರ್ತಿತ ಅಪರಾಧ ಮಾಡುವ ಹರೀಶ್ ಪೂಂಜಾ ತಡೆಯಾಜ್ಞೆಯ ಅವಕಾಶಕ್ಕೆ ಅನರ್ಹರಾಗಿದ್ದು, ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಅರ್ಜಿಯಲ್ಲಿ ಎಸ್ ಬಾಲನ್ ವಾದಿಸಿದ್ದಾರೆ.

ಶಾಸಕ ಹರೀಶ್ ಪೂಂಜಾ ಭಾಷಣ ಮಾಡುವ ವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಕ್ಷುಬ್ದವಾಗಿತ್ತು. ಹಾಗಾಗಿ ದ್ವೇಷ ಭಾಷಣದ ಹಿಂದೆ ಸಂಘಟಿತ ಪಿತೂರಿ ಇದೆ. ಸಂವಿಧಾನ, ಶಾಂತಿ ಮತ್ತು ರಾಷ್ಟ್ರದ ಅಖಂಡತೆಗೆ ಭಂಗ ತರುವ ಉದ್ದೇಶದಿಂದಲೇ ಶಾಸಕ ಪೂಂಜಾ ಈ ಕೃತ್ಯ ಮಾಡಿರುವುದರಿಂದ ಈ ಪ್ರಕರಣವು KCOCA ಕಾಯ್ದೆಯಡಿ ತನಿಖೆ ಮಾಡಲು ಅರ್ಹವಾಗಿದೆ. ಹಾಗಾಗಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಹರೀಶ್ ಪೂಂಜಾನನ್ನು ಪೊಲೀಸ್ ಕಸ್ಟಡಿಗೆ ನೀಡಿ ಹೇಳಿಕೆ ಪಡೆದು ಚಾರ್ಜ್ ಶೀಟ್ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಎಸ್ ಬಾಲನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವಕೀಲರಾದ ರಕ್ಷಿತಾ ಸಿಂಗ್ ಮತ್ತು ಪ್ರದೀಪ್ ಕುಮಾರ್ ಎಂಜಿ ಸಹಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News