×
Ad

ಕನ್ನಡಿಗರ ಬಗ್ಗೆ ಅವಹೇಳನಾಕಾರಿ ಹೇಳಿಕೆ: ತ್ರಿಪುರಾ ಮೂಲದ ಆರೋಪಿ ವಶಕ್ಕೆ

Update: 2025-07-18 23:39 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಕನ್ನಡಿಗರ ಬಗ್ಗೆ ಅವಹೇಳನಾಕಾರಿ ಮಾತನಾಡಿದ ಆರೋಪದಡಿ ತ್ರಿಪುರಾ ಮೂಲದ ಆರೋಪಿಯನ್ನು ಇಲ್ಲಿನ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಮಿಥುನ್ ಸರ್ಕಾರ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ. ಕರ್ನಾಟಕ, ಕನ್ನಡಿಗರ ಕುರಿತು ನಿಂದಿಸಿದ ಆಡಿಯೋ ತುಣುಕು ಹಾಗೂ ಆರೋಪಿಯ ವಿಳಾಸ ಸಹಿತ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಎಂಬುವರು ನೀಡಿದ ದೂರಿನನ್ವಯ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಯ ಫೋನ್ ನಂಬರ್ ಆಧರಿಸಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಮಿಥುನ್ ಸರ್ಕಾರ್ ಆರ್ಡರ್ ಮಾಡಿದ್ದ ಟೀ ಶರ್ಟ್ ನೀಡಲು ಜುಲೈ 17ರಂದು ರಾತ್ರಿ 9.30ಕ್ಕೆ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಬಂದಿದ್ದರು. ಈ ವೇಳೆ ವಿನಾಕಾರಣ ಕನ್ನಡದ ವಿಚಾರವಾಗಿ ಮಾತು ಆರಂಭಿಸಿದ್ದ ಮಿಥುನ್, ‘ನಾವು ಶೇ.70ರಷ್ಟು ಹಿಂದಿಯವರು ಕರ್ನಾಟಕದಲ್ಲಿದ್ದೇವೆ. ನಿಮ್ಮದು ಅತಿಯಾಗಿದೆ. ನಾವು ಇಲ್ಲಿಂದ ಹೋದರೆ ನೀವು ಕನ್ನಡದವರಿಗೆ ಟೊಮೆಟೋ ಖರೀದಿಸುವುದಕ್ಕೂ 10 ರೂಪಾಯಿ ಇರುವುದಿಲ್ಲ. ನಾವು ಬಂಗಾಳಿಗಳು ಮಾಡುವ ಊಟವನ್ನು ನೀವು ಕನ್ನಡಿಗರು ಕಲ್ಪಿಸಿಕೊಳ್ಳಲೂ ಸಹ ಆಗುವುದಿಲ್ಲ. ನೀವು ರಾಗಿ ಮುದ್ದೆ, ಇಡ್ಲಿ, ದೋಸೆ, ವಾರದಲ್ಲೊಮ್ಮೆ ಚಿಕನ್ ತಿನ್ನುತ್ತೀರಿ ಅಷ್ಟೇ. ನನ್ನ ಕಾಲ್ ರೆಕಾರ್ಡ್ ಮಾಡಿಕೋ, ನನ್ನ ಫೋನ್ ನಂಬರ್ ತೆಗೆದುಕೋ, ಬೇಗೂರು ನನ್ನ ವಿಳಾಸ, ನೀನು ಬಂದು ಭೇಟಿಯಾಗಿ ನಾನು ಬುಕ್ ಮಾಡಿರುವ ಆರ್ಡರ್ ಕೊಟ್ಟು ಹೋಗು’ ಎಂದು ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ.

‘ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನೀವೆಲ್ಲರೂ ಹೆದರಿಸುತ್ತೀರಿ. ನೀನು ನನಗೆ ಹೆದರಿಸುತ್ತೀಯಾ?’ ಎಂದು ಮಿಥುನ್ ಹೇಳಿದಾಗ ಆಗ ಡೆಲಿವರಿ ಎಕ್ಸಿಕ್ಯೂಟಿವ್ ಸೌಮ್ಯವಾಗಿ, ‘ಸರ್ ಕಾಲ್ ರೆಕಾರ್ಡ್ ಆಗುತ್ತಿದೆ’ ಎಂದಿದ್ದಾರೆ. ಈ ವೇಳೆ ಕರ್ನಾಟಕ, ಕನ್ನಡಿಗರ ಕುರಿತು ಆರೋಪಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದಲೂ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News