×
Ad

ʼಮೇಕೆದಾಟು ಯೋಜನೆʼಯಲ್ಲಿ ರಾಜಕೀಯ ಬೇಡ: ಎಚ್‌ಡಿಕೆಗೆ ಎಂ.ಬಿ.ಪಾಟೀಲ್‌ ತಿರುಗೇಟು

Update: 2025-07-05 16:36 IST

                                                                 ಎಂ.ಬಿ.ಪಾಟೀಲ್‌

ಬೆಂಗಳೂರು : ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಬಂದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಲಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎನ್ನುವುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕೋಸ್ಕರ ಮೇಕೆದಾಟು ಯೋಜನೆಯನ್ನು ವೃಥಾ ವಿರೋಧಿಸುತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆʼ ಎಂದಿದ್ದಾರೆ.

ಹಿಂದೆ ಕಾವೇರಿ ವಿವಾದವು ಸುಪ್ರೀಂಕೋರ್ಟ್‌ ಮುಂದೆ ಬಂದಾಗ ನಾನು ನೀರಾವರಿ ಸಚಿವನಾಗಿದ್ದೆ. ನಮ್ಮ ಪ್ರಯತ್ನದಿಂದ ರಾಜ್ಯಕ್ಕೆ 14 ಟಿಎಂಸಿ ಅಡಿ ನೀರು ಹೆಚ್ಚು ಸಿಕ್ಕಿತು. ಜೊತೆಗೆ, ಬೆಂಗಳೂರಿಗೂ ಕುಡಿಯುವ ನೀರು ಪೂರೈಸಲು ಕಾವೇರಿ ನೀರನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿತು. ನಮ್ಮ ರಾಜಧಾನಿಯ ಮೂರನೇ ಎರಡರಷ್ಟು ಭಾಗ ಕಾವೇರಿ ಕೊಳ್ಳದಿಂದ ಹೊರಗಿದೆ ಎಂದು ತಮಿಳುನಾಡಿನವರು ತಕರಾರು ತೆಗೆದಿದ್ದರು. ಆಗ ನಾವು ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಚೆನ್ನೈನ ಕುಡಿಯುವ ನೀರಿನ ಅಗತ್ಯಕ್ಕೆ ಕೃಷ್ಣಾ ಕೊಳ್ಳದಲ್ಲಿನ ತಮ್ಮ ಪಾಲಿನ ತಲಾ 5 ಟಿಎಂಸಿಯಂತೆ ಒಟ್ಟು 15 ಟಿಎಂಸಿ ನೀರನ್ನು ಬಿಟ್ಟುಕೊಟ್ಟಿದ್ದನ್ನು ನೆನಪಿಸಬೇಕಾಯಿತು. ಈ ವಿಚಾರದಲ್ಲಿ ನಮ್ಮ ಪರ ವಕೀಲ ಎಫ್‌.ಎಸ್‌.ನಾರಿಮನ್‌ ಪರಿಣಾಮಕಾರಿಯಾಗಿ ವಾದ ಮಂಡಿಸಿದರು ಎಂದು ಅವರು ವಿವರಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೋರಾಟದ ಪ್ರಶ್ನೆಯೇನೂ ಇಲ್ಲ. ಕುಮಾರಸ್ವಾಮಿಯವರು ಈಗ ಕೇಂದ್ರ ಸಂಪುಟದಲ್ಲಿದ್ದಾರೆ. ಅವರು ರಾಜ್ಯಕ್ಕೆ ಸಹಾಯ ಮಾಡಲು ಅವಕಾಶವಿದೆ. ಇದರತ್ತ ನಮ್ಮ ಗಮನವಿರಬೇಕಷ್ಟೆ. ಕ್ಷುಲ್ಲಕ ರಾಜಕಾರಣ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಿದ್ದಾರೆ.

ದೇವನಹಳ್ಳಿ ಭೂಸ್ವಾಧೀನ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಮತ್ತು ಕೈಗಾರಿಕೆ ಎರಡನ್ನೂ ನಾವು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕೈದು ಮಹತ್ತ್ವದ ಸಭೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶುಕ್ರವಾರ ಸಭೆ ನಡೆಸಿ, ಹತ್ತು ದಿನಗಳ ಕಾಲಾವಕಾಶ ಕೇಳಿದ್ದಾರೆ. ಇದರಲ್ಲಿ ಕಾನೂನು ತೊಡಕಿ ಸಂಗತಿಗಳಿವೆ. ಇವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡುವ ಅಗತ್ಯವಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದೆಲ್ಲ ಇತ್ಯರ್ಥಗೊಳ್ಳಲಿದೆʼ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News