‘ಹೊನ್ನಾವರ ಬಂದರು ಯೋಜನೆ’ ಕೈ ಬಿಡುವಂತೆ ಸರಕಾರಕ್ಕೆ ಮೇಧಾ ಪಾಟ್ಕರ್ ಒತ್ತಾಯ
‘ಸತ್ಯಶೋಧನಾ ವರದಿ ಬಿಡುಗಡೆ’
ಬೆಂಗಳೂರು : ಪರಿಸರ ಹಾಗೂ ಮತ್ಸ್ಯ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರಕಾರ ಕೈ ಬಿಡಬೇಕು. ಅಲ್ಲದೇ, ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದರು.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಫ್ರೈಡೇಸ್ ಫಾರ್ ಫ್ಯೂಚರ್-ಕರ್ನಾಟಕ(ಎಫ್‍ಎಫ್‍ಎಫ್-ಕೆ) ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ವತಿಯಿಂದ ಹೊನ್ನಾವರ ಬಂದರು ಯೋಜನೆ ಕುರಿತ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
2023ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೊನ್ನಾವರ ಬಂದರು ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿದ್ದ ಮೀನುಗಾರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಕಳ ವೈದ್ಯ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಮೇಧಾ ಪಾಟ್ಕರ್ ಹೇಳಿದರು.
ಈಗ ಅವರು ಚುನಾವಣೆಯಲ್ಲಿ ಗೆದ್ದು ಸರಕಾರ ರಚನೆ ಮಾಡಿದ್ದಾರೆ. ಆದರೆ, ಈ ಯೋಜನೆಯನ್ನು ನಿಲ್ಲಿಸುವ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ? ಜನರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಯೋಜನೆಗಳ ವಿರುದ್ಧ ಧ್ವನಿ ಎತ್ತಿದರೆ ನಮ್ಮನ್ನು ಅಭಿವೃದ್ಧಿ ವಿರೋಧಿಗಳು, ನಗರ ನಕ್ಸಲರು ಎನ್ನುತ್ತಾರೆ. ಅಭಿವೃದ್ಧಿ ಹೆಸರಿನಲ್ಲಿ ಬದುಕು ಕಳೆದುಕೊಳ್ಳುತ್ತಿದ್ದೇವೆ. ಹೊನ್ನಾವರ ಬಂದರು ಯೋಜನೆ ಇದಕ್ಕೆ ಉತ್ತಮ ಉದಾಹರಣೆ ಎಂದು ಮೇಧಾ ಪಾಟ್ಕರ್ ಹೇಳಿದರು.
ಈ ಯೋಜನೆಗೆ ಅಗತ್ಯವಿರುವ ಪರಿಸರ ಇಲಾಖೆಯ ಅನುಮತಿಯನ್ನು ಸಮರ್ಪಕವಾಗಿ ಪಡೆಯಲಾಗಿಲ್ಲ. ಅಲ್ಲದೇ, ಈ ಯೋಜನೆಯ ಅನುಷ್ಠಾನದಿಂದ ಸಾಮಾಜಿಕವಾಗಿ ಹಾಗೂ ಪರಿಸರದ ಮೇಲೆ ಆಗುವಂತಹ ಪರಿಣಾಮಗಳ ಕುರಿತು ವೈಜ್ಞಾನಿಕ ಮೌಲ್ಯಮಾಪನ ಮಾಡಿಲ್ಲ. ರಸ್ತೆ ನಿರ್ಮಾಣಕ್ಕಾಗಿ ನಡೆದ ಭೂಮಾಪನ ಕ್ರಿಯೆಯನ್ನು ವಿರೋಧಿಸಿದ ಕಾರಣಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ, 45 ಜನರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ ಎಂದು ಮೇಧಾ ಪಾಟ್ಕರ್ ಹೇಳಿದರು.
ಪೊಲೀಸರ ದೌರ್ಜನ್ಯ ಖಂಡಿಸಿ ಸುಮಾರು 40 ಮಂದಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಒಂದು ದಶಕದಿಂದ ಬಂದರು ವಿರೋಧಿಸಿ ಹೋರಾಟ ನಡೆಯುತ್ತಿದೆ. ಮೀನು ಒಣಗಿಸುವ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ. ವಿಶೇಷವಾಗಿ ಮಹಿಳೆಯರು ಒಣ ಮೀನು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 2019ರಿಂದ ಮೀನು ಒಣಗಿಸುವ ಭೂಮಿಗೆ ಬೇಲಿ ಹಾಕಲಾಗಿದೆ. ಅವರ ಪರಿಸ್ಥಿತಿ ಹೇಳಲು ಆಗುವುದಿಲ್ಲ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ನಮಗೆ ವಿಶ್ವಾಸವಿದೆ. ಈ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಗಣಿಸಿ, ಹೊನ್ನಾವರ ಬಂದರು ಯೋಜನೆಯನ್ನು ಕೈ ಬಿಟ್ಟು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಅವರಿಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೇಧಾ ಪಾಟ್ಕರ್ ಹೇಳಿದರು.
ಅದೇ ರೀತಿ, ಶರಾವತಿ ಪಂಪ್ ಸ್ಟೋರೆಜ್ ಯೋಜನೆ ಕುರಿತು ನಾವು ಪ್ರಶ್ನೆ ಎತ್ತಿದ್ದೇವೆ. ಈ ಯೋಜನೆ ಆದಿವಾಸಿಗಳು, ಸ್ಥಳೀಯ ಮೀನುಗಾರರು, ಪಶ್ಚಿಮ ಘಟ್ಟಗಳು, ಅಂತರ್ಜಲದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಮಾರು 16 ಸಾವಿರ ಮರಗಳು ನಾಶವಾಗಲಿವೆ ಎಂದು ಮೇಧಾಪಾಟ್ಕರ್ ಆತಂಕ ವ್ಯಕ್ತಪಡಿಸಿದರು.
ಪ್ರಮುಖ ಶಿಫಾರಸ್ಸುಗಳು: ರಾಜ್ಯ ಸರಕಾರ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್‍ಪಿಪಿಎಲ್)ಗೆ ನೀಡಿರುವ ಪರಿಸರ ಇಲಾಖೆಯ ಅನುಮತಿ ಹಿಂಪಡೆಯಬೇಕು. ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಪ್ರಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸಬೇಕು. ರಸ್ತೆ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು. ಟೊಂಕ 1 ಮತ್ತು ಟೊಂಕ 2 ಪ್ರದೇಶಗಳಲ್ಲಿ ವಾಸಿಸುವವರ ಮನೆ ಮತ್ತು ಉದ್ಯೋಗ ಸಂಬಂಧಿತ ಸಮೀಕ್ಷೆ ನಡೆಸಬೇಕು. ಮೀನು ಒಣಗಿಸಲು ಬಳಸುತ್ತಿದ್ದ ಪ್ರದೇಶಕ್ಕೆ ಪ್ರವೇಶ ಕಲ್ಪಿಸಲು ಅವಕಾಶ ನೀಡಬೇಕು.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ತೀರಾ ಭದ್ರತಾ ವಲಯ ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ ಎಚ್‍ಪಿಪಿಎಲ್‍ಗೆ ನೀಡಿರುವ ಎಲ್ಲ ಅನುಮತಿಗಳನ್ನು ಪುನರ್ ಪರಿಶೀಲನೆ ಮಾಡಬೇಕು. ಈ ಅನುಮತಿಗಳು ಸಿಆರ್‍ಝೆಡ್ ನಿಯಮಾವಳಿಗಳು ಮತ್ತು ಸಾರ್ವಜನಿಕ ಸಮಾಲೋಚನೆ ಅನಿವಾರ್ಯತೆಗಳನ್ನು ಪಾಲಿಸುತ್ತವೆಯೇ ಎಂಬುದರ ಸಂಪೂರ್ಣ ಮೌಲ್ಯಮಾಪನ ಮಾಡಬೇಕು.
ಹೊನ್ನಾವರ ಬಂದರು ಯೋಜನೆ ವಿರೋಧಿಸಿ 15 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. 1991ರಲ್ಲಿ ಬಂಗಾರಪ್ಪ ಸರಕಾರವಿದ್ದಾಗ ನಮಗೆ ಆಶ್ರಯ ಮನೆಗಳನ್ನು ನೀಡಲಾಗಿತ್ತು. ಸುಳ್ಳು ಪ್ರಕರಣಗಳನ್ನು ಹಾಕಿ, ನಮ್ಮ ಜೀವನ ಹಾಳು ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಜೈಲಿಗೆ ಕಳುಹಿಸಿದರು. ಈ ಘಟನೆಯಿಂದಾಗಿ ನನ್ನ ಪತ್ನಿ ಮಾನಸಿಕವಾಗಿ ಸಮಸ್ಯೆ ಎದುರಿಸಿದ್ದಾರೆ.
-ರಾಜೇಶ್ ತಾಂಡೇಲ್, ಅಧ್ಯಕ್ಷ, ಮೀನುಗಾರಿಕೆ ಕಾರ್ಮಿಕರ ಸಂಘ
ಮೀನುಗಾರಿಕೆ ನಮ್ಮ ಕಸುಬು. ಈಗ ನಮ್ಮ ನೆಲದಿಂದ ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇಲ್ಲಿ ನಮ್ಮ ಮನೆ ಇಲ್ಲ ಎನ್ನುತ್ತಾರೆ. ಎಲ್ಲೋ ಕಾಡಿನಲ್ಲಿ ಮನೆ ಕೊಡುವುದಾಗಿ ಹೇಳುತ್ತಿದ್ದಾರೆ. ಮೀನುಗಳನ್ನು ಒಣಗಿಸಿ ಮಾರಾಟ ಮಾಡುವುದು ನಮಗೆ ಜೀವನಾಧಾರ. ನಮಗೆ ಪೊಲೀಸರು ಹಾಗೂ ಬಂದರು ಪ್ರಾಧಿಕಾರದವರು ನೀಡುತ್ತಿರುವ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ.
-ರಿಹಾನಾ ಹಾಗೂ ಮುಹಮ್ಮದ್ ಕೋಯಾ, ಸಂತ್ರಸ್ತರು