‘ಮೈಕ್ರೋ ಫೈನಾನ್ಸ್’ ಸುಗ್ರೀವಾಜ್ಞೆ ಕರಡು ರಾಜ್ಯಪಾಲರ ಅಂಗಳಕ್ಕೆ?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರಕಾರ ನಿರ್ಧರಿಸಿ ಸುಗ್ರೀವಾಜ್ಞೆ ತರಲು ಮುಂದಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇದರ ಕರಡು ಪ್ರತಿಯನ್ನು ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ರಾಜ್ಯದಲ್ಲಿ ಅನೇಕರು ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳಕ್ಕೆ ಸಾವನ್ನಪ್ಪಿದ್ದು, ಕಂಪೆನಿಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರಲು ಸರಕಾರ ತೀರ್ಮಾನಿಸಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಡು ಪ್ರತಿಯನ್ನು ಪರಿಶೀಲಿಸಿ ಸುಗ್ರೀವಾಜ್ಞೆ ಅನುಮತಿಗಾಗಿ ರಾಜ್ಯಪಾಲರಿಗೆ ಕರಡು ಪ್ರತಿಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಸುಗ್ರೀವಾಜ್ಞೆಯಲ್ಲಿ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆಗೆ ಒಳಪಡಿಸಲು ಬದಲಾವಣೆ ಮಾಡಿ ಕರಡು ಪ್ರತಿಯನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಅನಧಿಕೃತವಾಗಿ ಸಾಲ ನೀಡಿದ್ದರೆ ಸಾಲಮನ್ನಾ ಮಾಡುವುದಾಗಿ ನಿರ್ಧರಿಸಲಾಗಿದೆ. ಅಲ್ಲದೆ, ಸುಗ್ರೀವಾಜ್ಞೆ ನೀಡಿದ 30 ದಿನಗಳಲ್ಲಿ ನೋಂದಣಿ ಕಡ್ಡಾಯ ಮಾಡಬೇಕು. ಅಲ್ಲದೇ ಈ ವೇಳೆ ಹಣದ ದಾಖಲೆಯನ್ನೂ ಉಲ್ಲೇಖ ಮಾಡಬೇಕು ಎಂದು ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.