ಮಾತೃ ಮರಣ ದರ ತಗ್ಗಿಸಲು ಆರೋಗ್ಯ ಇಲಾಖೆ ಪಣ : ದಿನದ 24 ಗಂಟೆಯೂ ಹೆರಿಗೆಗೆ ತ್ರಿವಳಿ ತಜ್ಞರು ಲಭ್ಯ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯದಲ್ಲಿ ಮಾತೃ ಮರಣ ದರ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ಪಣ ತೊಟ್ಟಿದ್ದು, ಅದರಂತೆ ಪ್ರತಿ ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಹೆರಿಗೆಗೆ ಸಂಬಂಧಿಸಿದಂತೆ ತ್ರಿವಳಿ ತಜ್ಞ ವೈದ್ಯರ ಸೇವೆ ಲಭ್ಯ ಇರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‍ಸಿ)ಗಳಲ್ಲಿ ಪ್ರಸೂತಿ, ಅರವಳಿಕೆ ಹಾಗೂ ಮಕ್ಕಳ ತಜ್ಞರನ್ನೊಳಗೊಂಡ ತ್ರಿವಳಿ ತಜ್ಞರ ವೈದ್ಯರ ಸೇವೆಯನ್ನು ದಿನದ 24 ಗಂಟೆಯೂ ಲಭ್ಯವಾಗುವಂತೆ ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದರು.
2024ನೆ ಸಾಲಿನಲ್ಲಿ ಮಾತೃ ಮರಣ ದರ ದಾಖಲೆ ಪ್ರಕಾರ 335 ಸಾವು ಆಗಿತ್ತು. ಈ ಮರಣ ಸೂಚ್ಯಂಕಕ್ಕೆ ಹೋಲಿಸಿದರೆ 2025ರ ಅಕ್ಟೋಬರ್‍ವರೆಗೆ 264 ಸಾವು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ, ಸಾವುಗಳ ಪ್ರಮಾಣ ದರ ಶೇ.24ರಷ್ಟು ಇಳಿಕೆಯಾಗಿದೆ. ಆದರೆ, ಈ ಪ್ರಮಾಣವನ್ನು “ಶ್ಯೂನ”ಕ್ಕೆ ಇಳಿಸಬೇಕೆಂಬ ಉದ್ದೇಶ-ಗುರಿಯನ್ನು ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ರಾಜ್ಯದಲ್ಲಿ 89 ತಾಯಿ ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ 100ರ ಗಡಿ ದಾಟುವಂತೆ ಯೋಜಿಸಲಾಗಿದೆ. ಜತೆಗೆ, ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ತಾಯಿ-ಮಕ್ಕಳ ಆಸ್ಪತ್ರೆಗಳಾಗುತ್ತವೆ. ಆದರೆ, ಅದಕ್ಕೆ ಪೂರಕವಾಗಿ ಮತ್ತು ಪೂರ್ವಭಾವಿಯಾಗಿ ಕೆಲವು ಬದಲಾವಣೆ ಮಾಡುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದರು.
ಕಡ್ಡಾಯ ವೈದ್ಯಕೀಯ ಸೇವಾ ಯೋಜನೆಯಡಿಯಲ್ಲಿ ಸುಧಾರಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಮತ್ತು ತೊಡಕುಗಳನ್ನು ನಿರ್ವಹಿಸಲು 125 ಸೂಪರ್ ಸ್ಪೇಷಲಿಸ್ಟ್ ಹುದ್ದೆಗಳನ್ನು ಸೃಷ್ಟಿಸಿ ಅರ್ಹ ವೈದ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದೇ ರೀತಿ ಹೆಚ್ಚುವರಿಯಾಗಿ 104 ರೇಡಿಯೋಲಜಿಸ್ಟ್ ಗಳನ್ನು ಮತ್ತು 23 ವೈದ್ಯರ ಹುದ್ದೆಗಳನ್ನು ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲ ಜಿಲ್ಲೆಗಳಲ್ಲಿ ತುರ್ತು ಪ್ರಸೂತಿ ಮತ್ತು ನವಜಾತ ಶಿಶು ಆರೈಕೆಗಾಗಿ ದಿನದ 24 ಗಂಟೆಗಳ ಕಾಲ ತಜ್ಞರ ಲಭ್ಯತೆ ಇರಬೇಕು. ಸಕಾಲಿಕ ಮತ್ತು ಸಂಘಟಿತ ಆರೈಕೆಯ ಮೂಲಕ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ತಗ್ಗಬೇಕು. ಆಗ ಮಾತ್ರವೇ ಸರಕಾರಿ ಆಸ್ಪತ್ರೆಗಳಲ್ಲಿ ಸುಧಾರಿತ ಮಾದರಿಯಲ್ಲಿ ಹೆರಿಗೆ ಮತ್ತು ಸಾರ್ವಜನಿಕರ ನಂಬಿಕೆ ಗಳಿಸಲು ಸಾಧ್ಯ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮಾತೃ ಮರಣ ದರ ತಗ್ಗಿಸಲು ಪ್ರಮುಖ ತೀರ್ಮಾನ..!
* ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‍ಸಿ) ತಜ್ಞ ವೈದ್ಯರನ್ನು ಹಾಗೂ ಇಬ್ಬರು ಸ್ಟಾಫ್ ನರ್ಸ್‍ಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.
* 30ಕ್ಕಿಂತ ಹೆಚ್ಚು ಹೆರಿಗೆಯಾಗುವ ಸಿಎಚ್‍ಸಿಗಳಲ್ಲಿ ತಲಾ ಒಬ್ಬ ಸ್ತ್ರೀರೋಗತಜ್ಞ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ಮುಂದುವರಿಸುತ್ತೇವೆ.
* ಸಮುದಾಯ ಆರೋಗ್ಯ ಕೇಂದ್ರದಲ್ಲಿನ ತಜ್ಞ ವೈದ್ಯರ ಸ್ಥಳಕ್ಕೆ ಇಬ್ಬರು ಎಂಬಿಬಿಎಸ್ ವೈದ್ಯರ ಭರ್ತಿಗೆ ಕ್ರಮ
* ಸಹಜ ಹೇರಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮಾಡಿಸಬಹುದಾಗಿದ್ದು, ಮಕ್ಕಳ ತಜ್ಞರ ಸೇವೆ ಮುಂದುವರಿಕೆ