ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ಬಿ.ಆರ್.ಪಾಟೀಲ್
ಬೆಂಗಳೂರು : ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಚಾರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹಿರಿಯ ಶಾಸಕ ಬಿ.ಆರ್.ಪಾಟೀಲ್, ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಆಳಂದ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ್ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸಂಜೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚಿಗೆ "ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ" ಎಂದು ಬಿ.ಆರ್.ಪಾಟೀಲ್ ಅವರು, ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ಜೊತೆ ಫೊನ್ ಸಂಭಾಷಣೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ತನಗೆ ಗೊತ್ತಿಲ್ಲದೆ ಕ್ಷೇತ್ರದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ನನ್ನ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ನಿಧಿಗೆ 17 ಕೋಟಿ ರೂ. ಹಣ ಬಂದಿದೆ. ಕಾಮಗಾರಿಯೂ ಸಹ ಶುರುವಾಗಿದೆ. ಆದರೆ ಗುದ್ದಲಿ ಪೂಜೆಗೂ ನನ್ನನ್ನು ಕರೆದಿಲ್ಲ ಎಂದು ಬೇಸರ ಹೊರಹಾಕಿದ್ದರು. ಇದು ರಾಜ್ಯದ ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು.