ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ಪಿ.ಎಂ. ನರೇಂದ್ರಸ್ವಾಮಿ
ಶಾಸಕ ಪಿ.ಎಂ. ನರೇಂದ್ರಸ್ವಾಮಿ
ಬೆಂಗಳೂರು: ನಾನು ಹಿರಿಯ ಶಾಸಕ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೂ ಆಗಿರುವ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ‘ನವೆಂಬರ್ ಕ್ರಾಂತಿ ಹಾಗೂ ಸಂಪುಟ ವಿಸ್ತರಣೆ’ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಡೀ ದೇಶ ಸುತ್ತಿ ದೇಶದ ಲೋಪದ ಬಗ್ಗೆ ಮಾತಾಡುತ್ತಿದ್ದಾರೆ. ಅವರ ಕೈಬಲ ಪಡಿಸುವುದು ನಮ್ಮ ಉದ್ದೇಶ. ಹಿರಿಯನಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ. ಇದನ್ನು ಹೈಕಮಾಂಡ್ ಒಪ್ಪಿಗೆಗೆ ಬಿಡುತ್ತೇನೆ. ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ನರೇಂದ್ರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಆಗುತ್ತಾರಾ? ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನರೇಂದ್ರಸ್ವಾಮಿ, ಅದರ ಬಗ್ಗೆ ಮಾತಾಡುವುದಕ್ಕೆ ನಾವ್ಯಾರು, ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ. ನಮ್ಮ ಹೈಕಮಾಂಡ್ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದರು.
ಮೋಹನ್‍ದಾಸ್ ಪೈ ಸುದ್ದಿಗೋಸ್ಕರ ಮಾತಾಡುವುದು ಬಿಡಲಿ:
ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೂ ಭ್ರಷ್ಟಾಚಾರ ಇದೆ ಎಂಬ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನರೇಂದ್ರಸ್ವಾಮಿ, ಉದ್ಯಮಿ ಮೋಹನ್ ದಾಸ್ ಪೈ ಅವರು ವಿನಾಕಾರಣ ಸುದ್ದಿಗೋಸ್ಕರ, ಪ್ರಚಾರಕೋಸ್ಕರ ಮಾತನಾಡುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಿ. ಮೋಹನ್ ದಾಸ್ ಪೈ ಅವರು ಅತ್ಯಂತ ವಿದ್ಯಾವಂತ, ಸಂಭಾವಿತ ವ್ಯಕ್ತಿ ಎಂದು ತಿಳಿದಿದ್ದೇನೆ. ಪ್ರಚೋದನಾತ್ಮಕವಾಗಿ ಮಾತಾಡುವ ಬದಲು ಸಮಸ್ಯೆ ಬಗೆಹರಿಸಲು ಗಮನ ಹರಿಸುವುದು ಒಳ್ಳೆಯದು ಎಂದರು.