ಮಂದಿರ ಉದ್ಘಾಟಿಸಿ ಬಹುಸಂಖ್ಯಾತರ ಮತಗಳ ಕ್ರೋಢೀಕರಣ ಮಾಡುತ್ತಿರುವ ಮೋದಿ: ಅಸದುದ್ದೀನ್ ಉವೈಸಿ
ಕಲಬುರಗಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹುಸಂಖ್ಯಾತರ ಮತಗಳ ಕ್ರೋಢೀಕರಣ ಮಾಡುತ್ತಿದ್ದಾರೆ. ಜೊತೆಗೆ, ಮುಸ್ಲಿಮರಿಗೆ ಭಾರತದ ರಾಜಕೀಯದಲ್ಲಿ ಅವರ ಸ್ಥಾನ ಎಲ್ಲಿದೆ ಎಂಬುದನ್ನು ತೋರಿಸಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು 500 ವರ್ಷ ಬಾಬರಿ ಮಸೀದಿಯಲ್ಲಿ ನಮಾಝ್ ಮಾಡಿದ್ದಾರೆ. 1992ರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಮಸೀದಿಯನ್ನು ಏನು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ನೀಡಿದ ಹೊರತಾಗಿಯೂ ಮಸೀದಿಯನ್ನು ಕೆಡವಿದರು ಎಂದರು.
ಬಹಳ ವ್ಯವಸ್ಥಿತವಾಗಿ ಮುಸ್ಲಿಮರಿಂದ ಬಾಬರಿ ಮಸೀದಿಯನ್ನು ಕಸಿದುಕೊಳ್ಳಲಾಗಿದೆ. ಕಾಂಗ್ರೆಸ್‍ನ ಜಿ.ಬಿ.ಪಂತ್ ಮುಖ್ಯಮಂತ್ರಿಯಾಗಿದ್ದಾಗ ರಾತ್ರೋರಾತ್ರಿ ಅಲ್ಲಿ ಮೂರ್ತಿಗಳನ್ನು ಇಡಲಾಗಿತ್ತು. 1986ರಲ್ಲಿ ಅಲ್ಲಿನ ಕಲೆಕ್ಟರ್ ನಾಯರ್ ಮೂರ್ತಿಗಳನ್ನು ತೆರವುಗೊಳಿಸದೆ, ಅವುಗಳು ಇದ್ದ ಜಾಗದಲ್ಲಿ ಪೂಜೆಗೆ ಅವಕಾಶ ಕಲ್ಪಿಸಿದರು. 1992ರ ಡಿ.6ರಂದು ಮಸೀದಿಯನ್ನು ಕೆಡವಿದರು ಎಂದು ಅವರು ಹೇಳಿದರು.
ವಿಶ್ವ ಹಿಂದು ಪರಿಷತ್ ರಚನೆಯಾದಾಗ ರಾಮ ಮಂದಿರದ ವಿಷಯವೇ ಇರಲಿಲ್ಲ. ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ನಂಬಿಕೆಯ ಆಧಾರದಲ್ಲಿ ಮುಸ್ಲಿಮರಿಗೆ ಈ ಸ್ಥಳ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಜೊತೆಗೆ, ಮಂದಿರವನ್ನು ಕೆಡವಿ ಇಲ್ಲಿ ಮಸೀದಿ ನಿರ್ಮಿಸಲಾಗಿರಲಿಲ್ಲ ಎಂಬುದನ್ನು ತಿಳಿಸಿದೆ ಎಂದು ಉವೈಸಿ ಹೇಳಿದರು.
ರಾತ್ರೋ ರಾತ್ರಿ ಮೂರ್ತಿಗಳನ್ನು ಇರಿಸಿದ್ದು, ಪೂಜೆಗೆ ಅವಕಾಶ ಕಲ್ಪಿಸಿದ್ದು ಹಾಗೂ ಮಸೀದಿ ಕೆಡವಿದ್ದು, ಈ ಮೂರು ವಿಚಾರಗಳ ಬಗ್ಗೆ ನಾನು ಪ್ರಶ್ನೆ ಮಾಡುತ್ತಿದ್ದೇನೆ. ಆದರೆ, ಜಾತ್ಯತೀತರು ಎಂದು ಕರೆಸಿಕೊಳ್ಳುವವರು ಚಕಾರ ಎತ್ತುತ್ತಿಲ್ಲ ಎಂದು ಪರೋಕ್ಷವಾಗಿ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳ ವಿರುದ್ಧ ಬೇಸರ ಹೊರ ಹಾಕಿದರು