×
Ad

ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಹೊಸ ʼವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಆರಂಭ

Update: 2025-11-07 22:28 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಭಾರತೀಯ ರೈಲ್ವೆ ಸಚಿವಾಲಯವು ಕರ್ನಾಟಕದ ಕೆಎಸ್‍ಆರ್ ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ನಡುವೆ ರೈಲು ಸಂಖ್ಯೆ 26651/26652 ಕೆಎಸ್‍ಆರ್ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ.

ಈ ಪ್ರಮುಖ ರೈಲು ಸೇವೆಯು ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಸಂಚರಿಸಲಿದ್ದು, ಪ್ರಯಾಣಿಕರಿಗೆ ಸುಧಾರಿತ ಸೌಕರ್ಯದೊಂದಿಗೆ ಕಡಿಮೆ ಪ್ರಯಾಣದ ಸಮಯವನ್ನು ಒದಗಿಸಿ ಎರಡೂ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ.

ಉದ್ಘಾಟನಾ ವಿಶೇಷ ರೈಲು: ಈ ಹೊಸ ಸೇವೆಯ ಆರಂಭದ ಸಂಕೇತವಾಗಿ, ರೈಲು ಸಂ. 06652 ಎರ್ನಾಕುಲಂ-ಕೆಎಸ್‍ಆರ್ ಬೆಂಗಳೂರು ಉದ್ಘಾಟನಾ ವಿಶೇಷ ರೈಲು ನ.8ರಂದು ಸಂಚರಿಸಲಿದೆ. ಈ ರೈಲು ಬೆಳಗ್ಗೆ 8ಕ್ಕೆ ಎರ್ನಾಕುಲಂನಿಂದ ಹೊರಟು, ಅದೇ ದಿನ ಸಂಜೆ 5:50ಕ್ಕೆ ಕೆಎಸ್‍ಆರ್ ಬೆಂಗಳೂರಿಗೆ ಆಗಮಿಸಲಿದೆ.

ಮಾರ್ಗಮಧ್ಯೆ, ಈ ರೈಲು ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ ಮತ್ತು ಕೃಷ್ಣರಾಜಪುರಂನಲ್ಲಿ ನಿಲ್ಲಲಿದೆ. ಉದ್ಘಾಟನಾ ವಿಶೇಷ ರೈಲು ಎಂಟು ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ನಾಲ್ಕು ಮೋಟಾರ್ ಕಾರುಗಳು, ಒಂದು ಎಕ್ಸಿಕ್ಯೂಟಿವ್ ಕ್ಲಾಸ್, ಒಂದು ಟ್ರೈಲರ್ ಕೋಚ್ ಮತ್ತು ಎರಡು ಡ್ರೈವಿಂಗ್ ಟ್ರೈಲರ್ ಕೋಚ್ ಗಳು ಇರಲಿವೆ.

ನಿಯಮಿತ ಸೇವೆಯ ವಿವರಗಳು: ರೈಲು ಸಂಖ್ಯೆ 26651/26652 ಕೆಎಸ್‍ಆರ್ ಬೆಂಗಳೂರು-ಎರ್ನಾಕುಲಂ-ಕೆಎಸ್‍ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ ಪ್ರೆಸ್‍ನ ನಿಯಮಿತ ಸೇವೆಯು ನ.11ರಿಂದ ಎರಡೂ ಕಡೆಗಳಿಂದ ಪ್ರಾರಂಭವಾಗಲಿದೆ. ಈ ರೈಲು ಕೆಎಸ್‍ಆರ್ ಬೆಂಗಳೂರಿನಿಂದ ಬೆಳಗ್ಗೆ 5:10ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 1:50ಕ್ಕೆ ಎರ್ನಾಕುಲಂ ತಲುಪಲಿದೆ. ಹಿಂತಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 26652 ಎರ್ನಾಕುಲಂ- ಕೆಎಸ್‍ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ ಪ್ರೆಸ್ ಎರ್ನಾಕುಲಂನಿಂದ ಮಧ್ಯಾಹ್ನ 2:20ಕ್ಕೆ ಹೊರಟು ಅದೇ ದಿನ ರಾತ್ರಿ 11ಕ್ಕೆ ಕೆಎಸ್‍ಆರ್ ಬೆಂಗಳೂರಿಗೆ ಆಗಮಿಸಲಿದೆ.

ವಾರದಲ್ಲಿ ಬುಧವಾರ ಹೊರತುಪಡಿಸಿ ಆರು ದಿನಗಳು ಸಂಚರಿಸುವ ಈ ರೈಲಿನಲ್ಲಿ ಉದ್ಘಾಟನಾ ರೈಲಿನಂತೆಯೆ ಎಂಟು ಬೋಗಿಗಳ ಸಂಯೋಜನೆ ಇರುತ್ತದೆ. ಈ ವಂದೇ ಭಾರತ್ ಎಕ್ಸ್‌ ಪ್ರೆಸ್ ವಾಲುವ ಆಸನಗಳು, ಸ್ವಯಂಚಾಲಿತ ಪ್ಲಗ್ ಡೋರ್‍ಗಳು, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳು ಮತ್ತು ಉತ್ತಮ ಆನ್ ಬೋರ್ಡ್ ಸೌಕರ್ಯದಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್‍ನ ಪರಿಚಯವು ಕರ್ನಾಟಕ ಮತ್ತು ಕೇರಳದ ನಡುವೆ ಅತ್ಯಾಧುನಿಕ ರೈಲು ಸಂಪರ್ಕವನ್ನು ಒದಗಿಸುವಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಈ ಸೇವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News