×
Ad

ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ | ʼಉತ್ತರʼ ಹುಡುಕುತ್ತಿರುವ ಪ್ರಶ್ನೆಗಳು ಹಲವು

Update: 2024-12-08 16:52 IST

ಬೆಳಗಾವಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ರಾಜ್ಯ ವಿಧಾನಮಂಡಲ ಅಧಿವೇಶನ ನಾಳೆಯಿಂದ ಆರಂಭಗೊಳ್ಳಲಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆ ನಡೆಯುವ ನಿರೀಕ್ಷೆ ಮೂಡಿದೆ. ಇದು ಬೆಳಗಾವಿಯಲ್ಲಿ ನಡೆಯುತ್ತಿರುವ 13ನೇ ಅಧಿವೇಶನ.

ಬೆಳಗಾವಿ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರ ಸಿಗುತ್ತದೆ. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಪ್ರತಿ ಬಾರಿಯೂ ಅಧಿವೇಶನ ಕಾಟಾಚಾರವೆಂಬಂತೆ ನಡೆಯುತ್ತಿರುವುದು ವಾಸ್ತವ.

ಉತ್ತರ ಕರ್ನಾಟಕದ ನಿರೀಕ್ಷೆಗಳು :

►ಉತ್ತರ ಕರ್ನಾಟಕದ ಉಸಿರು ಮಹದಾಯಿ ಯೋಜನೆ:

ಮಹದಾಯಿ ತೀರ್ಪು ಬಂದು 7 ವರ್ಷ ಕಳೆದರೂ ಕಾಮಗಾರಿ ಆರಂಭಿಸಲು ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ. ರಾಜಕೀಯ ಕೆಸರೆರಚಾಟದಿಂದ ಈ ಯೋಜನೆಗೆ ಹಿನ್ನಡೆಯಾಗಿದೆ. ಸರ್ವಪಕ್ಷಗಳು ರಾಜಕೀಯ ಮರೆತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಅನಿವಾರ್ಯತೆಯಿದೆ.

►ಬಗೆಹರಿಯದ ಕೃಷ್ಣಾ ಮೇಲ್ದಂಡೆ ಯೋಜನೆ:

ಪ್ರತಿ ಸಲ ಬೆಳಗಾವಿಯ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಚರ್ಚೆಗೆ ಬರುತ್ತದೆ. ಆದರೆ, ಪರಿಹಾರ ಮಾತ್ರ ಸಿಗುತ್ತಲೇ ಇಲ್ಲ. ಹಂಚಿಕೆಯಾಗಿರುವ ನೀರಿನ ಪಾಲನ್ನೇ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಗಭದ್ರಾ ನದಿಗೆ ಪರ್ಯಾಯ ಅಣೆಕಟ್ಟು ನಿರ್ಮಾಣದ ಕನಸು ನನಸಾಗಿಲ್ಲ.

►ಕೈಗಾರಿಕೆಗೆ ಸಿಗದ ಮುನ್ನಣೆ, ತಪ್ಪದ ʼಗುಳೆʼ:

ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇಲ್ಲಿನ ಪ್ರತಿಭೆಗಳು ಕೆಲಸ ಹುಡಕಿಕೊಂಡು ಪುಣೆ, ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ವಲಸೆ ಹೋಗುತ್ತಿದ್ದಾರೆ. ಸರ್ಕಾರವೂ ಸಹ ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ ಕಾರ್ಯಕ್ರಮ ನಡೆಸಿದಾಗ 83 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಯ ವಾಗ್ದಾನ ನಡೆದಿತ್ತು. ಅದರಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಕೂಡ ಒಂದು. ಆದರೆ, ಕೈಗಾರಿಕೆಗಳಿಗೆ ಭೂಮಿ ನೀಡುತ್ತೇವೆ ಎಂದಾಗ ಒಂದು ದರ, ಬಳಿಕ ಮತ್ತೊಂದು ದರ ನಿಗದಿ ಮಾಡಿದ್ದರಿಂದ ಕೈಗಾರಿಕೆಗಳು ಈ ಭಾಗದಲ್ಲಿ ತಮ್ಮ ಉದ್ಯಮ ಸ್ಥಾಪಿಸಲು ಹಿಂದೇಟು ಹಾಕಿವೆ.

►ಬೆಳೆ ಹಾನಿ ಪರಿಹಾರಕ್ಕೆ ಒತ್ತು :

ಹಿಂಗಾರು ಮಳೆ ಅಧಿಕ ಸುರಿದ ಪರಿಣಾಮ ಅಪಾರ ಪ್ರಮಾಣದ ಮನೆ-ಬೆಳೆ ಹಾನಿಯಾಗಿದೆ. ಆದರೆ, ಹಾನಿಗೆ ತಕ್ಕಂತೆ ಪರಿಹಾರ ಸಂತ್ರಸ್ತರಿಗೆ ದೊರಕಿಲ್ಲ. ಕುಸಿದ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂಬ ಬೇಡಿಕೆಯಿದೆ. ಜತೆಗೆ ಸಮರ್ಪಕ ಬೆಳೆಹಾನಿ ಪರಿಹಾರ ನೀಡುವ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಅನ್ನದಾತರ ಕೂಗು ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹಜರತ್‌ ನದಾಫ್‌

contributor

Similar News