2028ರ ಚುನಾವಣೆಯಲ್ಲಿ ಎನ್‍ಡಿಎ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾದರೆ ಒಳ್ಳೆಯದು’ ಎಂದು ಹೇಳಿದ್ದ ಡಿಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ನಮ್ಮ ಪಕ್ಷದ ಕಥೆ ಇರಲಿ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿಗೆ ಬಂದು ನಿಂತಿದೆ? ಎಷ್ಟು ಡಿಜಿಟ್'ಗೆ ನಿಂತಿದೆ. ಬಿಹಾರ ಅಷ್ಟೇ ಅಲ್ಲ, ಇನ್ನೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಿದೆ? ಮತ ಗಳಿಕೆಯಷ್ಟು? ಅಲ್ಲಿ ಡಿಕೆಶಿ ತಮ್ಮ ಪಕ್ಷವನ್ನು ಯಾವ ಪಕ್ಷದಲ್ಲಿ ವಿಲೀನ ಮಾಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಶೇ.37ರಷ್ಟು ಮತಪಾಲು ಹೊಂದಿದೆ. ಕಲ್ಯಾಣ ಕರ್ನಾಟಕದಲ್ಲಿಯೂ ಬಲಿಷ್ಟವಾಗಿದೆ. ಕಿತ್ತೂರು ಕರ್ನಾಟಕ, ಕರಾವಳಿ ಭಾಗದಲ್ಲಿಯೂ ನಮ್ಮ ಪಕ್ಷವಿದೆ. ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ನಡುವೆ ಸಹಜ ಮೈತ್ರಿ ಏರ್ಪಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟಿನ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಯ ಬಲ ತಿಳಿಯಲಿದೆ. ನಮ್ಮ ಹಾಗೂ ಬಿಜೆಪಿಯ ಮೈತ್ರಿ ಸ್ವಾಭಾವಿಕ. ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಆಗಿರುವ ಮೈತ್ರಿ ಇದು ಎಂದು ನಿಖಿಲ್ ಹೇಳಿದರು.
ಬಳ್ಳಾರಿ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಸಣ್ಣ ಕಾರಣಕ್ಕೆ ಶುರುವಾದ ಬಳ್ಳಾರಿ ಗಲಾಟೆ ಗುಂಡು ಹಾರಿಸಿ ಕೊಲೆಯವರೆಗೂ ಹೋಗಿದೆ. ಆದರೆ, ಅಲ್ಲಿನ ಶಾಸಕ ಜನಾರ್ದನ ರೆಡ್ಡಿ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿದೆ. ಈ ಸರಕಾರ ದ್ವೇಷ ಭಾಷಣ ತಡೆಗೆ ಮಸೂದೆ ಅಂಗೀಕಾರ ಮಾಡಿದೆ. ಇಲ್ಲಿ ದ್ವೇಷ ಭಾಷಣ ಅನ್ವಯ ಆಗುವುದಿಲ್ಲವೇ? ಈ ಸರಕಾರಕ್ಕೆ ಬಳ್ಳಾರಿಯ ಶಾಸಕ ಮಾತನಾಡಿದ ಮಾತುಗಳು ಕೇಳಿಸಲಿಲ್ಲವೇ? ಇದು ಆ ಮಸೂದೆ ವ್ಯಾಪ್ತಿಗೆ ಬರುವುದಿಲ್ಲವೇ? ಅವರಿಗೆ ರಕ್ಷಣೆ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಗೆ ಹೇಳುತ್ತಾರೆ ಎಂದು ನಿಖಿಲ್ ಪ್ರಶ್ನಿಸಿದರು.
ಈ ವೇಳೆಯಲ್ಲಿ ಪರಿಷತ್ ಸದಸ್ಯ ಟಿ.ಎ.ಶರವಣ, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.