×
Ad

ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಕೂಡಲೇ ಶ್ವೇತಪತ್ರ ಹೊರಡಿಸಬೇಕು: ಪ್ರತಿಪಕ್ಷ ನಾಯಕ ಆರ್.ಅಶೋಕ್

Update: 2025-12-10 21:00 IST

ಬೆಳಗಾವಿ (ಸುವರ್ಣ ವಿಧಾನಸೌಧ): ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ, ಕಾಂಗ್ರೆಸ್ ಸರಕಾರ ರೈತರಿಗೆ ಪರಿಹಾರ ನೀಡಿಲ್ಲ, ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯ ಮೇಲೆ ಸುದೀರ್ಘವಾಗಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರಕಾರ ಕೂಡಲೇ ಪರಿಹಾರ ನೀಡಬೇಕಿತ್ತು. ಆದರೆ, ಸರಕಾರ ವಿಳಂಬ ಮಾಡಿ ಪರಿಹಾರ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ʼಮಂಡಿ ಉದ್ದ ಕಬ್ಬು ಎದೆಮಟ್ಟ ಸಾಲ’ ಎಂಬ ಮಾತಿನಂತೆ ಕಬ್ಬು ಬೆಳೆಗಾರರ ಸ್ಥಿತಿ ಇದೆ. ರಾಜ್ಯದಲ್ಲಿ 41ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿದ್ದು, 9.81ಲಕ್ಷ ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತಿದೆ. 81 ಸಕ್ಕರೆ ಕಾರ್ಖಾನೆಗಳಿದ್ದು ಎಲ್ಲವೂ ನಷ್ಟದಲ್ಲಿವೆ ಎನ್ನುತ್ತಿದ್ದಾರೆ. ಹೊಸದಾಗಿ 31 ಕಾರ್ಖಾನೆ ಆರಂಭಕ್ಕೆ ಅರ್ಜಿ ಬಂದಿದೆ. ತೂಕ ಯಂತ್ರದಲ್ಲಿ ಮೋಸವಾಗುತ್ತಿದ್ದು, ಶೇ.50ರಷ್ಟು ಮಾತ್ರ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರ ಕಟಾವಿನಲ್ಲಿ ಶೇ.6ರಷ್ಟು ಕಡಿತವಾಗುತ್ತಿದೆ. ಹಳೆ ಮಾದರಿ ಆರ್‍ಎಸ್‍ಪಿ, ಎಸ್‍ಎಪಿ ಕಡೆ ಸರಕಾರ ಗಮನ ಕೊಡಬೇಕಿದೆ ಎಂದರು.

ಮುಧೋಳದಲ್ಲಿ 240 ಟ್ರಾಕ್ಟರ್‍ಗಳಿಗೆ ಬೆಂಕಿ ಬಿದ್ದು 1,033ಟನ್ ಕಬ್ಬು ಭಸ್ಮ ಆಗಿತ್ತು. ಪೊಲೀಸ್ ಇಲಾಖೆಯ ಭಯವಿದ್ದಿದ್ದರೆ ಇಷ್ಟೆಲ್ಲ ಆಗಲು ಸಾಧ್ಯವಿತ್ತೇ? 32 ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಭಾಗದ ರೈತ ಲಕ್ಕಪ್ಪ ಗುಣಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಯಾವುದೇ ಸಚಿವರು ಭೇಟಿ ಮಾಡಲಿಲ್ಲ ಎಂದು ಅವರು ತಿಳಿಸಿದರು.

ತುಂಗಭದ್ರಾ ಜಲಾಶಯದ ಗೇಟ್‍ನಿಂದ ನೀರು ಹರಿದು ಆಂಧ್ರಪ್ರದೇಶಕ್ಕೆ ಹೋಗಿದೆ. 33 ಗೇಟ್ ಅಳವಡಿಸದೇ ಇದ್ದಿದ್ದರಿಂದ ಈ ಸಮಸ್ಯೆಯಾಗಿದೆ. ನಾನು ಭೇಟಿ ನೀಡಿದ್ದಾಗ 12ಕೋಟಿ ರೂ.ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದರು. ಪಾದಯಾತ್ರೆ, ಬಂದ್ ಆಗುತ್ತಲೇ ಇದ್ದರೂ ಸರ್ಕಾರ ಕ್ರಮ ವಹಿಸಲಿಲ್ಲ. ಇದರಿಂದಾಗಿ ಎರಡು ಬೆಳೆ ನಷ್ಟವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 25ಸಾವಿರ ರೂ.ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಶೂನ್ಯ ಫಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ 2024-25ರಲ್ಲಿ 53 ಪದವಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿದೆ. 21ಸಾವಿರ ಶಿಕ್ಷಕ ಹುದ್ದೆ ಭರ್ತಿ ಮಾಡುತ್ತೇನೆಂದು ಸಿಎಂ ಹೇಳಿದ್ದರೂ, ಅದು ಆಗಿಲ್ಲ. ಈ ಭಾಗದಲ್ಲಿ 50,244 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ತಲಾ ಆದಾಯ 7 ಲಕ್ಷ ರೂ. ಇದ್ದರೆ, ಕಲಬುರ್ಗಿಯಲ್ಲಿ 1.43 ಲಕ್ಷ ರೂ.ಇದೆ ಎಂದು ಅವರು ತಿಳಿಸಿದರು.

ನಾಯಕತ್ವ ಇಲ್ಲ: ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ’ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಹೇಳಿದರೆ, ಮತ್ತೊಬ್ಬ ಶಾಸಕರು ‘ಡಿಕೆಶಿಗೆ ಕೂಲಿ ಕೊಡಿ’ ಎಂದು ಕೇಳುತ್ತಾರೆ. ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯಲ್ಲ. ಹಾದಿ-ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು.

ಮಂಗಳಮುಖಿಯರಿಗೆ ಮೀಸಲಾತಿ ನೀಡಿ: ಮಂಗಳಮುಖಿಯರು ರಸ್ತೆ ಸಿಗ್ನಲ್‍ಗಳಲ್ಲಿ ನಿಲ್ಲುತ್ತಾರೆ. ಸಮಾಜ ಅವರನ್ನು ಕೀಳಾಗಿ ನೋಡುತ್ತಿದೆ. ಆದ್ದರಿಂದ ಮಂಗಳಮುಖಿಯರಿಗೆ ಶೇ.0.5ರಷ್ಟಾದರೂ ಮೀಸಲಾತಿ ನೀಡುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಲಿ ಎಂದು ಅವರು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News