×
Ad

ಬಿಜೆಪಿಗೆ ಮತ್ತೊಂದು ಆಘಾತ?; ಬಿಬಿಎಂಪಿಯಲ್ಲಿ 3,000 ಕೋಟಿ ರೂ.ಗಳ ಹಗರಣ ಪತ್ತೆ!

Update: 2025-09-05 11:37 IST

File Photo

ಬೆಂಗಳೂರು: ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಈಗ ವಿಸರ್ಜಿಸಲಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಭಾರಿ ಅಕ್ರಮಗಳು ಪತ್ತೆಯಾಗಿದೆ. 2019ರಿಂದ 2022ರ ನಡುವೆ 3,049.35 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ತನಿಖಾ ಆಯೋಗ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ ಎಂದು deccanherald.com ವರದಿ ಮಾಡಿದೆ.

ಆಯೋಗವು ಪರಿಶೀಲಿಸಿದ 761 ಕಾಮಗಾರಿಗಳಲ್ಲೂ ದೋಷಗಳನ್ನು ಪತ್ತೆಹಚ್ಚಿದ್ದು, ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಮಳೆನೀರು ಚರಂಡಿಗಳು, ಯೋಜನೆ ಮಂಜೂರಾತಿ ಮತ್ತು ವಾಸ್ತವ್ಯ ಪ್ರಮಾಣಪತ್ರಗಳು, ಸರೋವರ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ಅಕ್ರಮಗಳು ನಡೆದಿದೆ ಎಂದು ವರದಿ ತಿಳಿಸಿದೆ.

ಆಯೋಗದ ವರದಿಯ ಪ್ರಕಾರ, ಬಿಬಿಎಂಪಿಯ ಹಲವು ಯೋಜನೆಗಳಲ್ಲಿ ಟೆಂಡರ್ ಪ್ರಕ್ರಿಯೆ ಉಲ್ಲಂಘನೆ, ಆಡಳಿತಾತ್ಮಕ ಅನುಮೋದನೆಯಿಲ್ಲದೆ ಕೈಗೊಂಡ ಕಾಮಗಾರಿಗಳು, ಅನಧಿಕೃತ ವ್ಯಕ್ತಿಗಳಿಗೆ ಸಂಭಾವನೆ ಪಾವತಿಗಳು, ಹೆಚ್ಚುವರಿ ಪಾವತಿಗಳು, ಗುಣಮಟ್ಟದ ನಿಯಂತ್ರಣದ ಕೊರತೆ ಸೇರಿದಂತೆ ಅನೇಕ ಅಕ್ರಮಗಳು ನಡೆದಿವೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಸಂಚು ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಆಯೋಗವು ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಶಿಫಾರಸು ಮಾಡಿದೆ. ಅಲ್ಲದೇ, ಹಿಂದಿನ ಸರ್ಕಾರಗಳು ಹಲವು ತನಿಖಾ ವರದಿಗಳನ್ನು ನಿರ್ಲಕ್ಷಿಸಿರುವುದನ್ನು ಕಟುವಾಗಿ ಟೀಕಿಸಿದೆ. “ತನಿಖಾ ಸಂಸ್ಥೆಗಳ ವರದಿಗಳು ಅನಾವಶ್ಯಕವಾಗುವ ಅಪಾಯವಿದೆ” ಎಂದು ಎಚ್ಚರಿಸಿದೆ.

ಬಿಬಿಎಂಪಿ ಅಕ್ರಮಗಳ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯ ಕುರಿತು ನಿರ್ಧಾರವನ್ನು ಗುರುವಾರ ಸಚಿವ ಸಂಪುಟ ತಾತ್ಕಾಲಿಕವಾಗಿ ಮುಂದೂಡಿದೆ.

ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಆಡಳಿತದ ವಿರುದ್ಧ ತನ್ನ ‘40% ಕಮಿಷನ್’ ಆರೋಪವನ್ನು ದೃಢಪಡಿಸಲು ಒತ್ತಡದಲ್ಲಿದೆ.

ಆದರೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ‘40% ಕಮಿಷನ್’ ಆರೋಪಕ್ಕೆ ಹೊಸ ಆಯಾಮ ನೀಡಿದೆ. ಈ ಆರೋಪಕ್ಕೆ ನಿರ್ಣಾಯಕ ಪುರಾವೆ ಸಿಕ್ಕಿಲ್ಲ. “‘40% ಕಮಿಷನ್’ ಆರೋಪ ಸಂಪೂರ್ಣ ಸತ್ಯ ಅಲ್ಲವಾಗಿರಬಹುದು” ಎಂದು ವರದಿ ಹೇಳಿದೆ.

ಬಿಬಿಎಂಪಿ ಹಗರಣದ ವರದಿಯು ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಯನ್ನು ತೀವ್ರವಾಗಿ ಗುರಿಯಾಗಿಸಲು ರಾಜಕೀಯ ಅಸ್ತ್ರವನ್ನಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಚಿವ ಸಂಪುಟದ ಇತರ ನಿರ್ಧಾರಗಳು:

ಮೆಟ್ರೋ ಹಂತ-3 ಯೋಜನೆ: ಜೆಪಿ ನಗರ 4ನೇ ಹಂತ-ಹೆಬ್ಬಾಳ ಹಾಗೂ ಹೊಸಹಳ್ಳಿ-ಕಡಬಗೆರೆ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ 9,700 ಕೋಟಿ ರೂಪಾಯಿ ಅನುಮೋದನೆ.

ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳು (STP): ಮಡಿವಾಳ, ಕಾಡುಬೀಸನಹಳ್ಳಿ, ಕಾಡುಗೋಡಿ, ಕೋರಮಂಗಲ, ಬಸವಪುರ ಮತ್ತು ಬೆಳ್ಳಂದೂರಿನಲ್ಲಿ ಆರು ಎಸ್‌ಟಿಪಿಗಳ ನಿರ್ಮಾಣಕ್ಕೆ 956.67 ಕೋಟಿ ರೂಪಾಯಿ ಮಂಜೂರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News