×
Ad

ಮತಗಳ್ಳತನ ಮೂಲಕ ಸಂವಿಧಾನ ದುರ್ಬಲಗೊಳಿಸುವ ಕುತಂತ್ರ: ಸಿಎಂ ಸಿದ್ದರಾಮಯ್ಯ

Update: 2025-09-15 19:37 IST

ಮುಖ್ಯಮಂತ್ರಿ ಸಿದ್ದರಾಮಯ್ಯ (Photo: X/@siddaramaiah)

ಬೆಂಗಳೂರು: ನಮ್ಮ ದೇಶದ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಎಲ್ಲರಿಗೂ ಒಂದೇ ಮತದ ಅಧಿಕಾರ ನೀಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮತಗಳ್ಳತನದಿಂದ ಸಂವಿಧಾನ ವ್ಯವಸ್ಥೆಯನ್ನೆ ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪ್ರಜಾಪ್ರಭುತ್ವ ದಿನಾಚರಣೆಯ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’ ಆಗಿದೆ. ಆದರೆ, ಈ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ‘ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂದಿದ್ದರು. ಈಗ ಮತಗಳ್ಳತನ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದ್ದು, ಇದನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯವಾಗುತ್ತದೆ ಎಂದ ಅವರು, ದೇಶದಲ್ಲಿ ವಿವಿಧ ಜಾತಿ ಧರ್ಮಗಳ ವ್ಯವಸ್ಥೆಯಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತರಲಾಗಿದೆ ಎಂದು ಅವರು ನುಡಿದರು.

ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆ ಉಂಟಾಗಿದೆ. ಆದ್ದರಿಂದ ಡಾ.ಅಂಬೇಡ್ಕರ್ ಅವರು ಸಂವಿಧಾನ ಜಾರಿಗೊಂಡ ಸಂದರ್ಭದಲ್ಲಿ ವೈರುಧ್ಯತೆಯಿರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಅಸಮಾನತೆಗಳಿವೆ. ಆದರೆ, ಇದನ್ನು ಹೋಗಲಾಡಿಸಿ ದೇಶದಲ್ಲಿ ಜನರಿಗೆ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯದ ಉದ್ದೇಶ ಯಶಸ್ವಿಯಾಗುತ್ತದೆ. ಇದಕ್ಕಾಗಿಯೇ 12ನೆ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಜೀವತುಂಬಿದ್ದರು ಎಂದು ಸಿದ್ದರಾಮಯ್ಯ ಅವರು ಉಲ್ಲೇಖಿಸಿದರು.

ನಮ್ಮ ಜಾತಿ ವ್ಯವಸ್ಥೆಗೆ ಚಲನೆಯಿಲ್ಲದೇ, ಸಮಾಜದಲ್ಲಿ ಆಳವಾಗಿ ಬೇರೂರಿದೆ. ಆರ್ಥಿಕ, ಸಾಮಾಜಿಕ ಸಮಾನತೆ ತರದೇ ಜಾತಿ ವ್ಯವಸ್ಥೇ ನಿರ್ಮೂಲಗೊಳಿಸಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ಬದಲಾವಣೆ ಸಾಧ್ಯ. ಹಿಂದಿನಿಂದಿಲೂ ಮಹಿಳೆಯರು ಹಾಗೂ ಶೂದ್ರರು ಅಕ್ಷರ ಸಂಸ್ಕೃತಿ ಹಾಗೂ ಅವಕಾಶಗಳಿಂದ ವಂಚಿಕತರಾಗಿದ್ದ ಕಾರಣ, ಅಸಮಾನತೆ ತಲೆದೋರಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಅಂಬೇಡ್ಕರ್ ಅವರು ಬೋಧಿಸಿದರು. ಸಮಾಜದಲ್ಲಿ ಬಹುಸಂಖ್ಯಾತರು ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.

ಸಂವಿಧಾನ ಆಶಯಗಳ ಅರಿವು ಎಲ್ಲರೂ ಹೊಂದಬೇಕೆಂಬ ದೃಷ್ಟಿಯಿಂದ ರಾಜ್ಯ ಸರಕಾರ, ಎಲ್ಲ ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಲು ಕ್ರಮ ಕೈಗೊಳ್ಳಲಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಆದರೆ, ಸಂವಿಧಾನದ ಬಗ್ಗೆ ಅರಿವಿಲ್ಲದೇ, ಅದರ ದುರುಪಯೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಮತದಾನ ಮದ್ದುಗುಂಡಿಗಿಂತ ಬಲಾಢ್ಯ ಎನ್ನುವ ಮಾತಿದೆ. ಮಹಾರಾಜರು ಮನೆಯಲ್ಲಿ ಕುಳಿತಿದ್ದು, ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ನಾಯಕರ ಉದಯವಾಗಿದ್ದೇ ಮತದಾನದ ಹಕ್ಕಿನಿಂದ. ಜನರ ಮತಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ನಾಯಕತ್ವ ಗುಣವಿಲ್ಲದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ವಿಶ್ವ ವಿದ್ಯಾಲಯಗಳಿಗೆ ತೆರಳಿ ಪಾಠ ಮಾಡಬಹುದು, ಅಷ್ಟು ಜ್ಞಾನವನ್ನು ಹೊಂದಿದ್ದಾರೆ. ಹೊಸ ಪೀಳಿಗೆಗೆ ಪ್ರಜಾಪ್ರಭುತ್ವ, ಮತದಾನದ ಬಗ್ಗೆ ತಿಳಿಸಬೇಕಿದೆ. ವಿದ್ಯಾರ್ಥಿಗಳಿಗೆ 18 ವರ್ಷವಾದ ನಂತರ ಮತದಾನದ ಮಹತ್ವ ತಿಳಿಯುತ್ತದೆ. ರಾಜಕೀಯದ ವ್ಯಾಖ್ಯಾನದ ಪ್ರಕಾರ ನಲವತ್ತೊಂಬತ್ತು ಸೊನ್ನೆಯಾಗುತ್ತದೆ, ಐವತ್ತೊಂದು ನೂರಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ನಾನು ಏಳನೆ ತರಗತಿಯಲ್ಲಿ ಇರುವಾಗಲೇ ಶಾಲಾ ಚುನಾವಣೆಯಲ್ಲಿ ಭಾಗವಹಿಸಿದ್ದೆ. ಅಂದು ನನ್ನ ಗುರುತು ನಕ್ಷತ್ರವಾಗಿತ್ತು. ಅಂದು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವನು ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುತ್ತಿದ್ದೇನೆ ಎಂದ ಅವರು, ದೇಶದಲ್ಲಿ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂದರ್ಭ. ನಾನು ಇದೇ ಸಂದರ್ಭದಲ್ಲಿ ಪಾಸ್ ಪಡೆದು ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ವೀಕ್ಷಣೆ ಮಾಡಲು ತೆರಳಿದ್ದೆ. ಅಂದು ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿದ್ದ ರಾಜೀವ್ ಗಾಂಧಿ ಅವರ ವಿರುದ್ಧ ಮುಗಿಬಿದ್ದಿದ್ದರು.

ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಟೀಕೆ ಮಾಡುತ್ತಿದ್ದರು. ಆಗ ರಾಜೀವ್ ಗಾಂಧಿ ಅವರು ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗೆ ಗಡಿ ಕಾಯಲು ಬಂದೂಕು ನೀಡುತ್ತೇವೆ. ಮತದಾನದ ಹಕ್ಕು ನೀಡುವುದು ತಪ್ಪೇ?' ಎಂದಿದ್ದರು. ನಾನು ಈ ದೇಶದ ಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ವಾದಿಸಿದ್ದರು ಎಂದು ನೆನಪನ್ನು ಮೆಲುಕು ಹಾಕಿದರು.

ಇದೇ ವೇಳೆ ಕ್ರೈಸ್‍ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪರಿಶಿಷ್ಟ ಜಾತಿ ಯುವಕರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಉದ್ಯಮ ಸ್ಥಾಪಿಸಲು ಸಹಾಯಧನ ವಿತರಣೆ ಮಾಡಿ, ಚಿತ್ರಕಲಾ, ಛಾಯಚಿತ್ರ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಬಿಡಿಎ ಅಧ್ಯಕ್ಷ, ಶಾಸಕ ಎನ್.ಎ.ಹಾರಿಸ್, ಶಾಸಕ ನಾರಾಯಣಸ್ವಾಮಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಸಂಪತ್ ರಾಜ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃಧ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತ ಡಾ.ರಾಕೇಶ್ ಸಿಂಗ್ ಸೇರಿದಂತೆ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

ಸಂವಿಧಾನ ಧಕ್ಕೆಗೆ ಮನುವಾದಿಗಳ ಪ್ರಯತ್ನ:

‘ಅಧಿಕಾರವನ್ನು ಉಳಿಸಿಕೊಳ್ಳಲು ಮತಗಳ್ಳತನದ ಹಾದಿಯನ್ನು ಹಿಡಿದಿದ್ದಾರೆ. ಆದ್ದರಿಂದ ನನ್ನ ಮತ ನನ್ನ ಹಕ್ಕು ಎಂಬುದು ಇಂತಹ ಸನ್ನಿವೇಶದಲ್ಲಿ ಪ್ರಮುಖವಾಗಿದೆ. ಇತ್ತ ಪ್ರಜಾಪ್ರಭುತ್ವದಲ್ಲಿ ಎಲ್ಲ ಜಾತಿ, ಧರ್ಮವೂ ಸಮಾನವಾಗಿದೆ. ಇಂತಹ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವನ್ನು ಮನುವಾದಿಗಳು ಪ್ರಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನ ವಿರೋಧಿಗಳು ಇದ್ದಾರೆ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News