×
Ad

ಬೆಲೆ ಏರಿಕೆಗೆ ಪ್ರಧಾನಿ ಮೋದಿಯೇ ಕಾರಣ: ಸಿಎಂ ಸಿದ್ದರಾಮಯ್ಯ

Update: 2025-06-16 23:08 IST

ದಾವಣಗೆರೆ: ದೇಶ ಲೂಟಿ ಮಾಡಿದ್ದೇ ಬಿಜೆಪಿ ಸಾಧನೆ. ಪ್ರಸ್ತುತ ಬೆಲೆ ಏರಿಕೆಗೆ ಪ್ರಧಾನಿ ಮೋದಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಜಿಲ್ಲೆಯ 1350 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಲವು ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಮಾತನಾಡಿದರು.

ಅಚ್ಚೇ ದಿನ್ ಆಯೇಗಾ..ಬಂತಾ? ವರ್ಷಕ್ಕೆ ಕೋಟಿ ಕೋಟಿ ಉದ್ಯೋಗ ಸೃಷ್ಟಿ ಅಂದ್ರು... ಬಂತಾ? ರೈತರ ಆದಾಯ ದುಪ್ಪಟ್ಟು ಮಾಡ್ತೇವೇ ಅಂದ್ರು.. ಮಾಡಿದ್ರಾ? ಬಿಜೆಪಿ ಏನೂ ಮಾಡಿಲ್ಲ.. ಏನೂ ಮಾಡದೇ ಮೋದಿಯವರ ಅಚ್ಚೇ ದಿನ್ ಆಯೆಗಾ ಬರೀ ಡೈಲಾಗ್. ಯಾರ ಕಣ್ಣಿಗಾದರೂ ಅಚ್ಚೆ ದಿನ ಕಂಡಿದೆಯಾ ? ಮೋದಿ ಪ್ರಧಾನಿ ಆಗುವ ಮೊದಲು ಪೆಟ್ರೋಲ್, ಡೀಸೆಲ್, ಚಿನ್ನ, ರಸಗೊಬ್ಬರ ಬೆಲೆ ಎಷ್ಟಿತ್ತು?. ಈಗ ಎಷ್ಟಿದೆ ಮೋದಿಯವರೇ? ಎಂದು ಪ್ರಶ್ನಿಸಿದ ಸಿಎಂ, ಬೆಲೆ ಏರಿಕೆಯ ಕಾರಣಕರ್ತ ಪ್ರಧಾನಿ ಮೋದಿಯವರೇ ಆಗಿದ್ದಾರೆ ಎಂದು ಪುನರುಚ್ಛರಿಸಿದರು.

ನಾವು ನೀಡಿದ್ದ 593 ಭರವಸೆಗಳಲ್ಲಿ 293 ಭರವಸೆ ಈಡೇರಿಸಿದ್ದೇವೆ. ಉಳಿದ ಮೂರು ವರ್ಷದ ಅವಧಿಯಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ. ಆದರೆ, 2008ರಲ್ಲಿ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಈಡೇರಿಸಿದ್ದು 60 ಮಾತ್ರ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಹಸಿ ಸುಳ್ಳುಗಳಿಗೆ ತಕ್ಕ ಉತ್ತರ ನೀಡುವ ರೀತಿ ಒಂದೇ ದಿನ 1350 ಕೋಟಿ ವಚ್ಚದ ಅಭಿವೃದ್ಧಿ ಕಾರ್ಯ ಇಂದು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದು ನುಡಿದರು.

56 ಇಂಚಿನ ಎದೆಯ ಪ್ರಧಾನಿ ಮೋದಿ ʼಯೂಸ್‍ಲೆಸ್ʼ ಆಗಿದ್ದಾರೆ. ಎದೆ ಎಷ್ಟು ಇಂಚು ಎನ್ನುವುದು ಮುಖ್ಯವಲ್ಲ. ಎದೆಯ ಒಳಗೆ ಬಡವರ ಮತ್ತು ಮಧ್ಯಮ ವರ್ಗದವರ ಬಗ್ಗೆ ಪ್ರೀತಿ, ಕಾಳಜಿ ಇಲ್ಲವಾಗಿದೆ ಎಂದು ಟೀಕಿಸಿದ ಸಿಎಂ, ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಕುರುಡು ಕಣ್ಣುಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಲುಪುತ್ತಿವೆ. ನಮ್ಮ ಬಳಿ ಹಣ ಇಲ್ಲದೇ ಹೋಗಿದ್ದರೆ ಒಂದೇ ದಿನ 1350 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.

ನಾವು ಗ್ಯಾರಂಟಿ ಘೋಷಿಸಿದಾಗ ಬಿಜೆಪಿಯ ಪ್ರಧಾನ ಮಂತ್ರಿ ಮೋದಿಯವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರವರೆಗೂ, "ಗ್ಯಾರಂಟಿಗಳು ಜಾರಿಯೇ ಆಗುವುದಿಲ್ಲ" ಎಂದು ಹಸಿ ಹಸಿ ಸುಳ್ಳು ಹೇಳಿದ್ದರು. ಈಗ ಐದೂ ಗ್ಯಾರಂಟಿಗಳೂ ಜಾರಿ ಆಗಿವೆ. ಬಿಜೆಪಿಯ ಮತದಾರರೂ ಸೇರಿ ಇಡೀ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ ಎಂದರು.

ಹೀಗಾಗಿ ಬಿಜೆಪಿಯವರ ಸುಳ್ಳುಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕುತ್ತಿಲ್ಲ. ಉಪ ಚುನಾವಣೆಯಲ್ಲಿ ಶಿಗ್ಗಾಂವ್, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನ ಸೋಲಿಸಿ ಕಾಂಗ್ರೆಸ್ ಗೆ ಶಕ್ತಿ ತುಂಬಿದರು. ಸಂಡೂರಿನಲ್ಲೂ ನಾವೇ ಗೆದ್ದೆವು. ಮುಂದಿನ ಚುನಾವಣೆಯಲ್ಲೂ ನಾವೇ ಮತ್ತೆ ಗೆದ್ದು ಬರ್ತೀವಿ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಸಿಎಂ ಸವಾಲು ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಸಚಿವ ಡಿ. ಸುಧಾಕರ್, ಶಾಸಕರಾದ ಶಾಂತನಗೌಡ, ಕೆ.ಎಸ್. ಬಸವಂತಪ್ಪ, ವೀರೇಂದ್ರ ಪಪ್ಪಿ, ಬಸವರಾಜ್ ಶಿವಗಂಗಾ, ಬಿ.ಪಿ. ಹರೀಶ್ ಇತರರಿದ್ದರು.

ಮಾತು ಸುಳ್ಳಾದರೆ ಮತ್ತೆ ವೇದಿಕೆ ಹತ್ತಲ್ಲವೆಂದ ಸಿಎಂ

ಅಭಿವೃದ್ಧಿ ವಿಚಾರದಲ್ಲಿ ನಾವು ಜಾತಿ, ಧರ್ಮ, ಪಕ್ಷ ನೋಡುವುದಿಲ್ಲ. ಎಲ್ಲಾ ಪಕ್ಷದವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು. ಅಭಿವೃದ್ಧಿ ವಿಚಾರದಲ್ಲಿ, ಕೇಂದ್ರ ಸರ್ಕಾರ ನಮಗೆ ಮಾಡಿದ ದ್ರೋಹದ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದರೆ ಮತ್ತೆ ಸಾರ್ವಜನಿಕವಾಗಿ ವೇದಿಕೆ ಹತ್ತೋದಿಲ್ಲ, ಭಾಷಣ ಮಾಡುವುದಿಲ್ಲ ಎಂದು ಸಿಎಂ ಸವಾಲು ಹಾಕಿದರು.

ಬಿಜೆಪಿಯದ್ದು ಭಾವನೆ ಜತೆ ರಾಜಕಾರಣ: ಡಿ.ಕೆ. ಶಿವಕುಮಾರ್

ಬಿಜೆಪಿಯವರು ಯಾವಾಗಲೂ ಭಾವನೆಗಳ ಮಾಡುತ್ತಿದ್ದರೆ ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನುಡಿದರು.

ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರ ಈಶ್ವರನೆಂಬಂತೆ ನೀವು ನೀಡಿದ ಅಧಿಕಾರದಿಂದ ಇಂದು ನಿಮ್ಮ ಋಣ ತೀರಿಸುವ ಹೊಣೆ ಹೊತ್ತಿದ್ದು, ಅದರಂತೆ ನಡೆಯುತ್ತೇವೆ. ರಾಜ್ಯದಲ್ಲಿ 140 ಶಾಸಕರನ್ನು ಮತದಾರರು ನೀಡಿದ್ದೀರಿ. ನಿಮ್ಮ ಆಶಯದಂತೆ ನಡೆಯುತ್ತೇವೆ ಎಂದು ಹೇಳಿದರು.

ಶಾಮನೂರು ಕುಟುಂಬ ಕಾಂಗ್ರೆಸ್‍ಗೆ ಶಕ್ತಿ ಇದ್ದಂತೆ. ಕರೋನಾ ಸಮಯದಲ್ಲಿ 10 ಕೋಟಿ ರೂ. ನೀಡಿ ಕೊರೊನಾ ತಡೆಗೆ ಶ್ರಮಿಸಿದ ಕುಟುಂಬ ಶಾಮನೂರು ಅವರದ್ದು, ಅವರ ಹೃದಯ ಶ್ರೀಮಂತಿಕೆ ದೊಡ್ಡದು. ಹಾಗಾಗಿ, ಜಿಲ್ಲೆಯ ಐವರು ಶಾಸಕರು ಪಾಂಡವರ ರೀತಿ ಎಸ್‍ಎಸ್ ಕುಟುಂಬಕ್ಕೆ ಬೆಂಬಲಿಸಿ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.

ಗ್ಯಾರಂಟಿಯಿಂದ ಅಭಿವೃದ್ಧಿಗೆ ತೊಡಕಾಗಿಲ್ಲ. ಅಭಿವೃದ್ಧಿ ಸಾಗುತ್ತಲೇ ಇದೆ ಎಂಬುದಕ್ಕೆ ಇಂದು ದಾವಣಗೆರೆಯಲ್ಲಿ 1350 ಕೋಟಿ ಕಾಮಗಾರಿಗಳೇ ಸಾಕ್ಷಿ. ನಾವು ನುಡಿದಂತೆ ನಡೆದಿದ್ದೇವೆ ಎಂದಿಗೂ ಮಾತು ತಪ್ಪಲ್ಲ.

ಜಿ. ಪರಮೇಶ್ವರ್, ಗೃಹ ಸಚಿವ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News