×
Ad

ಪೊಲೀಸರು ಸ್ವಂತ ವಾಹನದ ಮೇಲೆ ʼಪೊಲೀಸ್ʼ​ ಎಂದು ಬರೆಸುವಂತಿಲ್ಲ: ಡಾ. ಜಿ. ಪರಮೇಶ್ವರ್​

Update: 2025-03-11 12:01 IST

ದಾವಣಗೆರೆ, ಮಾ.11: ಪೊಲೀಸ್ ಇಲಾಖೆಯ ಅಧಿಕಾರಿಗಳು ‌ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದು ವೇಳೆ ಬರೆಸಿದ್ದರೆ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ್‌ ಅವರು ಸ್ಪಷ್ಟಪಡಿಸಿದ್ದಾರೆ.

ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 561ಕ್ಕೆ ಲಿಖಿತ ಮೂಲಕ ಸಚಿವ ಡಾ.ಜಿ.ಪರಮೇಶ್ವರ್​ ಅವರು ಈ ಉತ್ತರ ನೀಡಿದ್ದಾರೆ.

ರಾಜ್ಯದ ಪೊಲೀಸ್​ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ಹಾಗಿದ್ದಲ್ಲಿ, ಸ್ವಂತ ವಾಹನಗಳ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಕೆಲ ಪೊಲೀಸ್​ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ, ಇವರ ವಿರುದ್ಧ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು? ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಸಚಿವ ಡಾ.ಜಿ‌.ಪರಮೇಶ್ವರ್ ಅವರು, ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಯಿಸಿಕೊಂಡಿರುವುದು ಗೃಹ ಇಲಾಖೆಯ ಗಮನಕ್ಕೆ ಬಂದಿದೆ. ಸ್ವಂತ ವಾಹನದ ಮೇಲೆ ಪೊಲೀಸ್ ಅಧಿಕಾರಿಗಳು ಹಾಗೂ ನೌಕರರು ಪೊಲೀಸ್ ಎಂದು ಬರೆಸಿದ್ದರೆ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನು ಕ್ರಮ ಆಗುತ್ತದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News