ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಿಎಂ ಸೂಚನೆ
ಬೆಂಗಳೂರು : ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿರುವ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ತೀವ್ರ ನಿಗಾ ವಹಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಕೇಂದ್ರ ಸರಕಾರದ ಅಸಹಾಕಾರದ ನಡುವೆಯೂ ರಾಜ್ಯದ ರೈತರಿಗೆ ಅನಾನುಕೂಲ ಆಗದಂತೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸಿ ದುರ್ಲಾಭ ಮಾಡಿಕೊಳ್ಳಲು ಕಾಳಸಂತೆಕೋರರು ಪ್ರಯತ್ನಿಸುತ್ತಿರುವ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರುಗಳ ಜೊತೆ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ನಡುವೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಜಿಲ್ಲೆ ಮತ್ತು ತಾಲ್ಲೂಕು, ಹೋಬಳಿ ಎಲ್ಲೂ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಯಾಗಬಾರದು. ಈ ರೀತಿ ಅಭಾವ ಸೃಷ್ಟಿಸುತ್ತಿರುವವರ ಬಗ್ಗೆ ತೀವ್ರ ನಿಗಾ ಇಟ್ಟು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.