×
Ad

ಸಚಿವೆ ವಿರುದ್ಧ ಸಿ.ಟಿ. ರವಿ ಅಶ್ಲೀಲ ಪದ ಬಳಸಿರುವುದು ವಿಡಿಯೊದಲ್ಲಿ ದೃಢ?

Update: 2025-01-17 18:28 IST

ಸಿ.ಟಿ. ರವಿ

ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಸಿರುವುದು ವಿಡಿಯೊದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ಗಂಟೆಯ ವಿಡಿಯೊ ರೆಕಾರ್ಡ್‍ನಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಹೇಳಲಾಗುತ್ತಿದೆ.ಆದರೆ, ಈ ಧ್ವನಿ ಸಿಟಿ ರವಿ ಅವರದ್ದೇ, ಅಲ್ಲವೇ ಎಂಬುವುದು ವಿಧಿ ವಿಜ್ಞಾನ ಪ್ರಯೋಗಾಲಯ ಖಚಿತಪಡಿಸಬೇಕಿದೆ. ಹಾಗಾಗಿ, ಈ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಎಪಿಆರ್) ನೀಡಿದ್ದ ಸದನದ ವಿಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ನೋಟಿಸ್, ವಿಚಾರಣೆ?: ಇನ್ನೊಂದೆಡೆ, ಅಶ್ಲೀಲ ಪದ ಬಳಸಿದ್ದಾರೆನ್ನಲಾದ ಪ್ರಕರಣ ಸಂಬಂಧ ಪರಿಷತ್ ಸದಸ್ಯರಾದ ಉಮಾಶ್ರೀ, ನಾಗರಾಜ್ ಯಾದವ್ ಹೇಳಿಕೆ ದಾಖಲಿಸಿಕೊಂಡಿರುವ ಸಿಐಡಿ, ಇದೀಗ ಯತೀಂದ್ರ ಸಿದ್ದರಾಮಯ್ಯ ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

ಪ್ರಕರಣ ಸಂಬಂಧ ಪರಿಷತ್ ಕಾಂಗ್ರೆಸ್ ಸದಸ್ಯ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಸಿಐಡಿ ವಿಚಾರಣೆಗೆ ಹಾಜರಾಗಿದ್ದು, ಕಲಾಪದ ಸಂದರ್ಭದಲ್ಲಿ ಸಿ.ಟಿ.ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಅಶ್ಲೀಲ ಪದ ಬಳಸಿದ ಕುರಿತು ಹೇಳಿಕೆ ದಾಖಲಿಸಿದ್ದಾರೆ.

ಉಮಾಶ್ರೀ ಅವರನ್ನು ಮಹಿಳಾ ಡಿವೈಎಸ್ಪಿಯೊಬ್ಬರು ವಿಚಾರಣೆ ನಡೆಸಿದ್ದಾರೆ. ಹಾಗೆಯೇ ನಾಗರಾಜ್ ಯಾದವ್ ಅವರನ್ನು ಡಿವೈಎಸ್ಪಿ ಕೇಶವಮೂರ್ತಿ ವಿಚಾರಣೆ ನಡೆಸಿದ್ದು, ಲಿಖಿತ ಮತ್ತು ಮೌಖಿಕ ರೂಪದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಕೂಡ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಷತ್ ಕಲಾಪ ಎಷ್ಟು ಗಂಟೆಗೆ ಆರಂಭವಾಯಿತು? ನೀವುಗಳು ಎಷ್ಟು ಗಂಟೆವರೆಗೂ ಕಲಾಪದಲ್ಲಿ ಇದ್ದಿರಿ? ಸಿ.ಟಿ.ರವಿ ಅವರು ಮಹಿಳಾ ಸಚಿವರಿಗೆ ಅಶ್ಲೀಲ ಪದ ಬಳಸಿದಾಗ ಸ್ಥಳದಲ್ಲಿ ಹಾಜರಾತಿ ಸೇರಿ ಸುಮಾರು 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನೊಂದೆಡೆ, ಸಿ.ಟಿ.ರವಿ ಅವರು ವಿಚಾರವೊಂದರ ಚರ್ಚೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದು ಸ್ಪಷ್ಟವಾಗಿ ಕೇಳಿದ್ದೇವೆ. ಜತೆಗೆ ಸ್ಥಳದಲ್ಲಿದ್ದ ನಾವು ಕೂಡಲೇ ರವಿ ವಿರುದ್ಧ ಪ್ರತಿಭಟನೆ ನಡೆಸಿದ್ದೇವು. ಅವರ ವಿರುದ್ಧ ಕ್ರಮಕ್ಕೆ ಸಭಾಪತಿಗಳಿಗೂ ದೂರು ನೀಡಿದ್ದೇವೆ ಎಂದು ಇಬ್ಬರು ಸದಸ್ಯರು ಹೇಳಿಕೆ ದಾಖಲಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ನಾಗರಾಜ್ ಯಾದವ್, ಪರಿಷತ್ ಕಲಾಪದಲ್ಲಿ ನಡೆದ ಘಟನೆಯನ್ನು ತನಿಖಾಧಿಕಾರಿಗಳಿಗೆ ಸಮರ್ಪಕವಾಗಿ ವಿವರಿಸಿದ್ದೇನೆ. ಯಾವ ಮಹಿಳೆಗೂ ಆ ರೀತಿಯ ಅಶ್ಲೀಲ ಪದ ಬಳಸಬಾರದು. ಸಿ.ಟಿ.ರವಿ ಅವರು ಮೊಂಡುತನ ಬಿಟ್ಟು ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಯತೀಂದ್ರ ಸಿದ್ದರಾಮಯ್ಯಗೂ ನೋಟಿಸ್?:

ಪ್ರಕರಣ ಸಂಬಂಧ ಸಿಐಡಿ ತನಿಖಾ ತಂಡ ಪರಿಷತ್‍ನ ಕೆಲ ಸದಸ್ಯರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಸದ್ಯದಲ್ಲೇ ಯತೀಂದ್ರ ಸಿದ್ದಾರಾಮಯ್ಯ ಅವರಿಗೂ ನೋಟಿಸ್ ಕೊಟ್ಟು, ಅವರಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪೊಲೀಸ್ ತನಿಖೆ ಪ್ರಾಮಾಣಿಕವಾಗಿ ಇದೆಯೇ?: ಸಿಟಿ ರವಿ ಪ್ರಶ್ನೆ

ಇವೆಲ್ಲ ಅಂತೆಕಂತೆಗಳು, ಉದ್ದೇಶ ಪೂರಕ ವಿರುದ್ಧದ ಸುದ್ದಿಗಳು ಸೃಷ್ಟಿಸಲು ಮಾಡಿರುವ ಒಂದು ಷಡ್ಯಂತ್ರದ ಭಾಗ. ಎಫ್‍ಎಸ್‍ಎಫ್ ವರದಿ ಪ್ರಕ್ರಿಯೆ ಮುಗಿದಿಲ್ಲ. ತನಿಖೆಯೂ ಪೂರ್ಣಗೊಂಡಿಲ್ಲ. ಆದರೂ, ಕೆಲ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ ಎಂದು ಸಿಟಿ ರವಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News