ʼಧರ್ಮಸ್ಥಳ ದೂರುʼ | ಸಾಕ್ಷ್ಯಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಿ: ಸಿಎಂ ಸಿದ್ದರಾಮಯ್ಯಗೆ ನಟ ಪ್ರಕಾಶ್ ರಾಜ್ ಆಗ್ರಹ
ನಟ ಪ್ರಕಾಶ್ ರಾಜ್ / ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ನಟ ಪ್ರಕಾಶ್ ರಾಜ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಧರ್ಮಸ್ಥಳ ದೂರು ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಏನು ಮಾಡಬೇಕು ನೋಡುತ್ತೇವೆ. ಅಗತ್ಯ ಬಿದ್ದರೆ ಎಸ್.ಐ.ಟಿ ರಚನೆ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಹೇಳಿದ್ದರು.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, "ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೆ, ನಿಮ್ಮ ಮಾತಿನ ಮೇಲೆ ಭರವಸೆಯಿದೆ. ಆದರೆ ಈ ದಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ ಸಾಕ್ಷ್ಯಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗುದುಕೊಳ್ಳಿ. ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ" ಎಂದು ಅವರು ಆಗ್ರಹಿಸಿದ್ದಾರೆ.