×
Ad

ಭಾರತವು ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆಯಾಗುವತ್ತ ದಾಪುಗಾಲು : ಪ್ರಧಾನಿ ಮೋದಿ

Update: 2025-08-10 18:57 IST

ಪ್ರಧಾನಿ  ಮೋದಿ | PC : x/@ANI

ಬೆಂಗಳೂರು, ಆ.10: ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಕಳೆದ 11 ವರ್ಷಗಳಲ್ಲಿ, ನಮ್ಮ ಆರ್ಥಿಕತೆಯು 10ನೆ ಸ್ಥಾನದಿಂದ 5ನೆ ಸ್ಥಾನಕ್ಕೆ ತಲುಪಿದೆ. ನಾವು ಮೂರನೆ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದ್ದೇವೆ. ಸುಧಾರಣೆ-ಕಾರ್ಯನಿರ್ವಹಣೆ-ಪರಿವರ್ತನೆಯ ಮನೋಭಾವದಿಂದ ನಾವು ಈ ವೇಗವನ್ನು ಗಳಿಸಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ರವಿವಾರ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ 15,610 ಕೋಟಿ ರೂಮೊತ್ತದ ಮೆಟ್ರೋ ಹಂತ-3ರ ಶಂಕುಸ್ಥಾಪನೆ, 7,160 ಕೋಟಿ ರೂ.ಮೊತ್ತದ ಮೆಟ್ರೋ ಹಂತ-2ರ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

2014ರಲ್ಲಿ ಮೆಟ್ರೋ ಕೇವಲ 5 ನಗರಗಳಿಗೆ ಸೀಮಿತವಾಗಿತ್ತು. ಈಗ 24 ನಗರಗಳಲ್ಲಿ ಒಂದು ಸಾವಿರ ಕಿಲೋಮೀಟರ್‍ಗಿಂತ ಹೆಚ್ಚು ಮೆಟ್ರೋ ಜಾಲವಿದೆ. ಭಾರತವು ಈಗ ವಿಶ್ವದ ಮೂರನೆ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ದೇಶವಾಗಿದೆ. 2014ರ ಮೊದಲು, ಸುಮಾರು 20 ಸಾವಿರ ಕಿಲೋಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿತ್ತು. ಕಳೆದ 11 ವರ್ಷಗಳಲ್ಲಿ ನಾವು 40 ಸಾವಿರ ಕಿಲೋಮೀಟರ್‍ಗಳಿಗಿಂತ ಹೆಚ್ಚು ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಿಸಿದ್ದೇವೆ ಎಂದು ತಿಳಿಸಿದರು.

2014 ರವರೆಗೆ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 160 ಕ್ಕಿಂತ ಹೆಚ್ಚಾಗಿದೆ. 2014ರಲ್ಲಿ ಕೇವಲ 3 ರಾಷ್ಟ್ರೀಯ ಜಲಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದವು, ಈಗ ಈ ಸಂಖ್ಯೆ 30 ಕ್ಕೆ ಏರಿದೆ. 2014ರವರೆಗೆ, ನಮ್ಮ ದೇಶದಲ್ಲಿ ಕೇವಲ 7 ಏಮ್ಸ್ ಮತ್ತು 387 ವೈದ್ಯಕೀಯ ಕಾಲೇಜುಗಳು ಇದ್ದವು. ಈಗ 22 ಏಮ್ಸ್ ಮತ್ತು 704 ವೈದ್ಯಕೀಯ ಕಾಲೇಜುಗಳು ಜನರಿಗೆ ಸೇವೆ ಸಲ್ಲಿಸುವಲ್ಲಿ ನಿರತವಾಗಿವೆ ಎಂದು ಪ್ರಧಾನಿ ವಿವರಿಸಿದರು.

ಕಳೆದ 11 ವರ್ಷಗಳಲ್ಲಿ, ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಲಾಗಿದೆ. ನಮ್ಮ ಮಧ್ಯಮ ವರ್ಗದ ಮಕ್ಕಳು ಇದರಿಂದ ಎಷ್ಟು ಪ್ರಯೋಜನ ಪಡೆದಿದ್ದಾರೆಂದು ನೀವು ಊಹಿಸಬಹುದು. ಈ 11 ವರ್ಷಗಳಲ್ಲಿ, ಐ.ಐ.ಟಿ.ಗಳ ಸಂಖ್ಯೆಯೂ 16 ರಿಂದ 23ಕ್ಕೆ, ಟ್ರಿಪಲ್ ಐ.ಟಿ.ಗಳ ಸಂಖ್ಯೆ 9 ರಿಂದ 25ಕ್ಕೆ ಮತ್ತು ಐ.ಐ.ಎಂ.ಗಳ ಸಂಖ್ಯೆ 13 ರಿಂದ 21ಕ್ಕೆ ಏರಿದೆ ಎಂದು ಅವರು ಮಾಹಿತಿ ನೀಡಿದರು.

ದೇಶವು ಪ್ರಗತಿ ಹೊಂದುತ್ತಿರುವ ವೇಗದಲ್ಲಿ ಬಡವರು ಮತ್ತು ಹಿಂದುಳಿದವರ ಜೀವನವೂ ಬದಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಾವು 4 ಕೋಟಿಗೂ ಹೆಚ್ಚು ಮನೆಗಳನ್ನು ನೀಡಿದ್ದೇವೆ. ಈಗ ನಮ್ಮ ಸರಕಾರವು 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಿದೆ. ನಾವು ಕೇವಲ ಹನ್ನೊಂದು ವರ್ಷಗಳಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇದು ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಗೆ ಘನತೆ, ಸ್ವಚ್ಛತೆ ಮತ್ತು ಭದ್ರತೆಯ ಹಕ್ಕನ್ನು ನೀಡಿದೆ ಎಂದು ನರೇಂದ್ರ ಮೋದಿ ಹೇಳಿದರು.

ಭಾರತದ ಒಟ್ಟು ರಫ್ತು 468 ಬಿಲಿಯನ್ ಡಾಲರ್‌ಗಳಿಂದ 824 ಬಿಲಿಯನ್ ಡಾಲರ್‌ಗಳಾಗಿದೆ. ಮೊಬೈಲ್‍ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು, ಈಗ ಮೊಬೈಲ್ ಹ್ಯಾಂಡ್‍ಸೆಟ್‍ಗಳ ಅಗ್ರ ಐದು ರಫ್ತುದಾರರಾಗಿದ್ದೇವೆ. ಎಲೆಕ್ಟ್ರಾನಿಕ್ಸ್ ರಫ್ತು ಸುಮಾರು 6 ಬಿಲಿಯನ್ ಡಾಲರ್‌ ಗಳಿಂದ 38 ಬಿಲಿಯನ್ ಡಾಲರ್‌ ಗಳನ್ನು ತಲುಪಿದೆ. ಆಟೋಮೊಬೈಲ್ ರಫ್ತು 16 ಬಿಲಿಯನ್ ಡಾಲರ್‌ ಗಳಿಂದ ದ್ವಿಗುಣಗೊಂಡಿದೆ ಎಂದು ಅವರು ವಿವರಿಸಿದರು.

ಡಿಜಿಟಲ್ ಇಂಡಿಯಾದೊಂದಿಗೆ ‘ವಿಕಸಿತ ಭಾರತ'ದ ಪಯಣ ಮುಂದುವರಿಯುತ್ತದೆ. ಇಂಡಿಯಾ ಎಐ ಮಿಷನ್ ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ ಎಐ ನಾಯಕತ್ವದತ್ತ ಸಾಗುತ್ತಿದೆ. ಸೆಮಿಕಂಡಕ್ಟರ್ ಮಿಷನ್ ಕೂಡಾ ವೇಗ ಪಡೆಯುತ್ತಿದ್ದು, ಶೀಘ್ರದಲ್ಲೆ ಭಾರತವು ತನ್ನದೇ ‘ಮೇಡ್-ಇನ್-ಇಂಡಿಯಾ' ಚಿಪ್ ಅನ್ನು ಹೊಂದಲಿದೆ ಎಂದು ಅವರು ಹೇಳಿದರು.

ಭವಿಷ್ಯದ ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಬಡವರ ಸಬಲೀಕರಣ. ಡಿಜಿಟಲೀಕರಣವು ಈಗ ದೇಶದ ಪ್ರತಿ ಹಳ್ಳಿಯನ್ನು ತಲುಪಿದೆ. ಯುಪಿಐ ಮೂಲಕ, ವಿಶ್ವದ ರಿಯಲ್ ಟೈಮ್ ವಹಿವಾಟುಗಳಲ್ಲಿ ಶೇ.50ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.

ತಂತ್ರಜ್ಞಾನವು ಸರಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು 2,200ಕ್ಕೂ ಹೆಚ್ಚು ಸರಕಾರಿ ಸೇವೆಗಳು ಮೊಬೈಲ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ. ಉಮಂಗ್ ಆಪ್ ಮೂಲಕ ನಾಗರಿಕರು ಮನೆಯಿಂದಲೇ ಸರಕಾರಿ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಡಿಜಿಲಾಕರ್ ಮೂಲಕ ಸರಕಾರಿ ಪ್ರಮಾಣಪತ್ರಗಳನ್ನು ನಿರ್ವಹಿಸುವ ತೊಂದರೆ ನಿವಾರಣೆಯಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಸಮಾಜದ ಕಡೆಯ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುವುದು ನಮ್ಮ ಗುರಿ. ಈ ರಾಷ್ಟ್ರೀಯ ಪ್ರಯತ್ನಕ್ಕೆ ಬೆಂಗಳೂರು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ನಮ್ಮ ಮುಂದಿನ ದೊಡ್ಡ ಆದ್ಯತೆಯೆಂದರೆ ತಂತ್ರಜ್ಞಾನದಲ್ಲಿ ಸ್ವಾವಲಂಬಿಗಳಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್‌ ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ಈಗ ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡುವ ಸಮಯ ಬಂದಿದೆ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ವೇಗಗೊಳಿಸಬೇಕು. ಏಕೆಂದರೆ ಈಗ ಪ್ರತಿ ಕ್ಷೇತ್ರದಲ್ಲೂ ಸಾಫ್ಟ್ ವೇರ್ ಮತ್ತು ಆಪ್‍ಗಳನ್ನು ಬಳಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವುದು ಅತ್ಯಗತ್ಯ ಎಂದು ನರೇಂದ್ರ ಮೋದಿ ಹೇಳಿದರು.

ಭಾರತದ ಉತ್ಪನ್ನಗಳು ‘ಶೂನ್ಯ ದೋಷ, ಶೂನ್ಯ ಪರಿಣಾಮ' ಮಾನದಂಡಕ್ಕೆ ಬದ್ಧವಾಗಿರಬೇಕು., ಅಂದರೆ ಅವು ಗುಣಮಟ್ಟದಲ್ಲಿ ದೋಷರಹಿತವಾಗಿರಬೇಕು ಮತ್ತು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು ಎಂದ ಅವರು, ಕರ್ನಾಟಕದ ಪ್ರತಿಭೆಯು ‘ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ. ನಾಗರಿಕರ ಜೀವನವನ್ನು ಸುಧಾರಿಸಲು ಸಹಯೋಗದ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ಸುಧಾರಣೆಗಳನ್ನು ಜಾರಿಗೆ ತರುವುದು ಒಂದು ಪ್ರಮುಖ ಜವಾಬ್ದಾರಿಯಾಗಿದೆ. ಕಳೆದ ದಶಕದಲ್ಲಿ ಕೇಂದ್ರ ಸರಕಾರವು ನಿರಂತರವಾಗಿ ಸುಧಾರಣೆಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ಉದಾಹರಣೆಗೆ, ಕಾನೂನುಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ‘ಜನ್ ವಿಶ್ವಾಸ್ ಮಸೂದೆ'ಯನ್ನು ಜಾರಿಗೊಳಿಸಲಾಗಿದೆ. ಈಗ ‘ಜನ್ ವಿಶ್ವಾಸ್ 2.0' ಅನ್ನು ಪರಿಚಯಿಸಲಾಗುತ್ತಿದೆ. ಅನಗತ್ಯ ಕ್ರಿಮಿನಲ್ ನಿಬಂಧನೆಗಳಿರುವ ಕಾನೂನುಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲು ರಾಜ್ಯ ಸರಕಾರಗಳು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಸರಕಾರಿ ನೌಕರರಿಗೆ ಸಾಮರ್ಥ್ರ್ಯಥ್ಯ ಆಧಾರಿತ ತರಬೇತಿ ನೀಡುವ ‘ಮಿಷನ್ ಕರ್ಮಯೋಗಿ' ಉಪಕ್ರಮವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ರಾಜ್ಯಗಳು ತಮ್ಮ ಅಧಿಕಾರಿಗಳಿಗಾಗಿ ಈ ಕಲಿಕಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ‘ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮ' ಮತ್ತು ‘ಆಕಾಂಕ್ಷಿ ಬ್ಲಾಕ್ ಕಾರ್ಯಕ್ರಮ'ಗಳ ಮೇಲೆ ಗಮನ ಹರಿಸುವಂತೆ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News