×
Ad

‘ಬಳ್ಳಾರಿ ಪಾದಯಾತ್ರೆ’ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ : ಸಚಿವ ಪ್ರಿಯಾಂಕ್ ಖರ್ಗೆ

"ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೇ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ?"

Update: 2026-01-15 19:01 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ಪಾದಯಾತ್ರೆ ಮಾಡಬೇಕೆಂದರೆ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕು. ಆದರೆ, ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೇ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ?. ಕಾಲೆಳೆದುಕೊಳ್ಳುವ ಆಟದಲ್ಲಿ ‘ಬಳ್ಳಾರಿ ಪಾದಯಾತ್ರೆ’ ಪ್ರಹಸನದ ಪ್ರದರ್ಶನ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ, ಗೋಲಿಬಾರ್ ಖಂಡಿಸಿ ಬಿಜೆಪಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿ, ನಂತರ ಪ್ರತಿಭಟನೆಗೆ ಸೀಮಿತಗೊಳಿಸಿರುವ ನಡೆಯನ್ನು ಟೀಕಿಸಿ ಗುರುವಾರ ಈ ಸಂಬಂಧ ಎಕ್ಸ್‌ ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.

ಪಾದಯಾತ್ರೆಯನ್ನು ಮುನ್ನಡೆಸುವ ನಾಯಕತ್ವವಿಲ್ಲ, ಯಾರಾದರೂ ನಾಯಕರಾಗಿಬಿಡುವ ಅಸೂಯೆ, ಬಣ ಜಗಳದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವಲ್ಲಿ ಇಲ್ಲದ ಒಮ್ಮತ, ಇದೆಲ್ಲಕ್ಕೂ ಮಿಗಿಲಾಗಿ ಪಾದಯಾತ್ರೆಗೆ ವ್ಯಕ್ತವಾಗದ ಜನ ಬೆಂಬಲ, ಇದೆಲ್ಲವನ್ನೂ ಅರಿತ ಬಿಜೆಪಿಯವರ ಪಾದಗಳು ಜಗನ್ನಾಥ ಭವನದಿಂದ ಹೊರಗೆ ಹೊರಡದೆ ನಿಂತಿವೆ ಎಂದು ಅವರು ಲೇವಡಿ ಮಾಡಿದ್ದಾರೆ.

ಬಿಜೆಪಿಯ ಪಾದಯಾತ್ರೆ ರಾಜಕೀಯ ಜಿದ್ದಿಗಾಗಿಯೆ ಹೊರತು, ಜನ ಕೇಂದ್ರಿತ ವಿಷಯಗಳಿಗಾಗಿ ಅಲ್ಲ, ಹೀಗಿರುವಾಗ ಯಾತ್ರೆಗೆ ಜನ ಬೆಂಬಲ ಸಿಗುವುದು ಕನಸಿನ ಮಾತು. ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜನ ಬೆಂಬಲದೊಂದಿಗೆ ಮಾಡಿದ್ದ ಚಾರಿತ್ರಿಕ ಬಳ್ಳಾರಿ ಪಾದಯಾತ್ರೆಯು, ಜನ ಬಿಜೆಪಿಯನ್ನು ಕಿತ್ತೆಸೆಯುವಂತೆ ಮಾಡಿತ್ತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮೇಕೆದಾಟು ಪಾದಯಾತ್ರೆಯನ್ನು ಜನ ಹಿತಕ್ಕಾಗಿ ಮಾಡಿದ್ದೆವು, ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕಕ್ಕೆ ಯಶಸ್ಸು ದೊರಕಿದೆ. ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದೆವು, ಅದರ ಪರಿಣಾಮ, ಯಶಸ್ಸನ್ನು ನಾಡು ಕಂಡಿದೆ. ಕಾಂಗ್ರೆಸ್ ನಡೆಸಿದ ಎಲ್ಲ ಪಾದಯಾತ್ರೆಗಳಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ, ನಾವು ಎತ್ತಿಕೊಂಡ ವಿಷಯಗಳಿಗೆ ಯಶಸ್ಸೂ ದೊರಕಿದೆ ಎಂದು ಅವರು ಹೇಳಿದ್ದಾರೆ.

ಏಕೆಂದರೆ ನಾವು ಪಾದಯಾತ್ರೆಗಳನ್ನು ಜನರಿಗಾಗಿ ನಡೆಸಿದ್ದೇವೆ ಹೊರತು ರಾಜಕೀಯ ಮೇಲಾಟಕ್ಕಾಗಿ ಅಲ್ಲ. ರಾಜ್ಯ ಬಿಜೆಪಿ ಎಂದಿಗೂ ಕಾಂಗ್ರೆಸ್ಸಿನಂತೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವರಿಗೆ ಕಾಂಗ್ರೆಸ್ಸಿನಂತೆ ಜನಪರ ಚಿಂತನೆಗಳಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News