ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಸಾಧನೆ ಮಾಡಬೇಕಿದೆ : ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ | PC: x/@rajnathsingh
ಬೆಂಗಳೂರು : ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಇನ್ನೂ ಹೆಚ್ಚು ಸಾಧನೆ ಮಾಡಬೇಕಿದ್ದು, ಅಧಿಕ ಭಾಗೀದಾರರನ್ನು ಆಕಷಿಸುವಂತೆ ದೇಶವು ಮುನ್ನಡೆಯಬೇಕಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಯಲಹಂಕದ ವಾಯು ನೆಲೆಯಲ್ಲಿ ಆಯೋಜಿಸಿದ್ದ ಏರೋ ಇಂಡಿಯಾ–2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಏರೋ ಖಾಸಗಿ ಕಂಪನಿ, ಕೈಗಾರಿಕೆಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದು, ವಿವಿಧ ರಕ್ಷಣಾ ಸಚಿವರ, ವಿವಿಧ ಕಂಪನಿ ಮುಖ್ಯಸ್ಥರ ಸಮಾವೇಶಗಳು ನಡೆದಿವೆ ಎಂದರು.
ನಮ್ಮ ದೇಶಕ್ಕೆ ಬೇಕಾದ ರಕ್ಷಣಾ ಕ್ಷೇತ್ರದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದ್ದು, ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದೇವೆ. ಒಂದು ದಶಕದ ಹಿಂದೆ ಶೇ.65-70ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ನಾವೇ ಶೇ.65-70 ರಷ್ಟು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಏರೋ ಇಂಡಿಯಾ ಅಗಾಧ ಶಕ್ತಿ ಹಾಗೂ ಸ್ಫೂರ್ತಿಯನ್ನು ತಂದಿದೆ. ಇದರಿಂದ ರಕ್ಷಣಾ ವಲಯದ ಉದ್ದಿಮೆಗಳು, ಸ್ಟಾರ್ಟ್ ಆಪ್ ಕಂಪನಿಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ. ರಕ್ಷಣಾ ಉತ್ಪನ್ನಗಳನ್ನು ಇದೀಗ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಏರೋ ಇಂಡಿಯಾದಲ್ಲಿ ಪ್ರದರ್ಶನ ನೀಡಿದ ವೈಮಾನಿಕ ವಿಮಾನಗಳು ಎಲ್ಲರ ಕಣ್ಮನ ಸೆಳೆದವು. ವೈಯಕ್ತಿವಾಗಿ ನನಗೆ ಬಹಳ ಹುರುಪು ನೀಡಿದೆ. ಇಸ್ರೋ, ಎಚ್.ಎ.ಎಲ್, ಡಿ.ಆರ್.ಡಿ.ಓ ಮುಂತಾದ ಸಂಸ್ಥೆಗಳ ಸಹಕಾರದಿಂದ ನಾವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇವೆ ಎಂಬುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಮಂತ್ರಿ ಸಂಜಯ್ ಸೇಠ್, ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಕುಮಾರ್, ನೌಕಪಡೆ ಮುಖ್ಯಸ್ಥ ಅಡ್ಮೀರಲ್ ದಿನೇಶ್ ಕೆ. ತ್ರಿಪಾತಿ ಸೇರಿದಂತೆ ರಕ್ಷಣ ಪಡೆ, ನೌಕಪಡೆ, ವಾಯುಪಡೆಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.