×
Ad

ರಾಜ್ಯಸಭೆ ಚುನಾವಣೆ: ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಗೆ ಬಿಜೆಪಿ ನೋಟಿಸ್

Update: 2024-03-02 18:51 IST

ಎಸ್.ಟಿ.ಸೋಮಶೇಖರ್ /  ಶಿವರಾಮ ಹೆಬ್ಬಾರ್

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರದ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಮತದಾನದಿಂದ ದೂರ ಉಳಿದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಮುಖ್ಯ ಸಚೇತಕರು ಶೋಕಾಸ್ ನೋಟಿಸ್ ನೀಡಿದ್ದಾರೆ.

ಶನಿವಾರ ಪಕ್ಷದ ಇಬ್ಬರೂ ಶಾಸಕರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಿರುವ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು, ಕಾರಣ ಕೇಳಿ ಮಾ.5ರ ಒಳಗಾಗಿ ಉತ್ತರ ನೀಡಬೇಕೆಂದು ನೋಟಿಸ್ ಕಳುಹಿಸಿದ್ದಾರೆ.

ಪಕ್ಷಾಂತರ ಮತ್ತು ಅನರ್ಹತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಫೆ.26ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆಂಬ ಆರೋಪವಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಮತ ಹಾಕುವಂತೆ ಸೂಚನೆ ನೀಡಿದ್ದು, ಅದನ್ನು ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬ ಆರೋಪವಿದೆ.

ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ ಅನಾರೋಗ್ಯದ ಕಾರಣ ಮತದಾನಕ್ಕೆ ಗೈರು ಹಾಜರಾಗಿದ್ದರು. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಮತದಾನ ಮಾಡಲು ಹೋಗಿರಲಿಲ್ಲ. ಇದರಲ್ಲಿ ಯಾವುದೇ ದುರದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಇದನ್ನು ಒಪ್ಪದ ಬಿಜೆಪಿ ಮತದಾನ ಹಿಂದಿನ ದಿನ ಸೋಮವಾರ ಶಿವರಾಮ್ ಹೆಬ್ಬಾರ್ ಮತ್ತು ಸೋಮಶೇಖರ್, ಕಾಂಗ್ರೆಸ್ ಶಾಸಕ ರಂಗನಾಥ್ ಅವರ ಕಾರಿನಲ್ಲಿ ಕಾಂಗ್ರೆಸ್ ಶಾಸಕರಿದ್ದ ಹಿಲ್ಟನ್ ರೆಸಾರ್ಟ್‍ಗೆ ಭೇಟಿ ನೀಡಿದ್ದರೆಂಬ ಮಾತು ಕೇಳಿಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News