×
Ad

ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಮನೆಗೆ ಮಾರಿ ಇದ್ದಂತೆ : ರಾಮಲಿಂಗಾರೆಡ್ಡಿ ಟೀಕೆ

Update: 2025-10-14 17:43 IST

ರಾಮಲಿಂಗಾರೆಡ್ಡಿ 

ಬೆಂಗಳೂರು, ಅ.13: ಸರಕಾರಿ ವ್ಯವಸ್ಥೆಗಳಿಗೆ ಜನಪ್ರತಿನಿಧಿಗಳು ಬೆಂಬಲ ಕೊಡಬೇಕು. ಆದರೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಅವರು ‘ಮನೆ ಮಾರಿ, ಊರಿಗೆ ಉಪಕಾರಿ’ ಇದ್ದಂತೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಯೊಂದರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೇಡ ಎಂದು ಹೇಳಿಕೊಂಡಿದ್ದಾರೆ. ಆದರೆ, ಸರಕಾರಿ ವ್ಯವಸ್ಥೆಗಳಿಗೆ ಜನಪ್ರತಿನಿಧಿಗಳು ಬೆಂಬಲ ಕೊಡಬೇಕು ಎಂದರು.

ಬೆಂಗಳೂರಿನ ರಸ್ತೆ ಗುಂಡಿ ಬಿದ್ದಿದೆ ಹೌದು, ಗುಂಡಿ ಬಿದ್ದಿಲ್ಲ ಎಂದರೆ ತಪ್ಪಾಗುತ್ತದೆ. ಅದನ್ನು ನೋಡಿಕೊಳ್ಳುವುದು ಪಾಲಿಕೆ ಕೆಲಸ. ಗುಂಡಿಗಳು ಬೀಳದೆ ಹಾಗೆ ನಾವು ನೋಡಿಕೊಳ್ಳಬೇಕಿತ್ತು. ಆದರೆ ಅದನ್ನು ಮುಚ್ಚುವ ಕೆಲಸ ಆಗುತ್ತಿದೆ. ಆದರೆ, ಬಿಜೆಪಿ ಬಗ್ಗೆ ಮೋಹನ್ ದಾಸ್ ಪೈ ಮಾತನಾಡಲ್ಲ, ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಯಾವ ಸರಕಾರ ತಪ್ಪು ಮಾಡಿದರೂ ಟ್ವೀಟ್ ಮಾಡಲಿ. ಕೇವಲ ನಮ್ಮ ಸರಕಾರದ ಬಗ್ಗೆ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಆರ್ಥಿಕವಾಗಿ ದುರ್ಬಲ ವರ್ಗ ಬಸ್‍ಗಳಲ್ಲಿ ಓಡಾಡುತ್ತಾರೆ. ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಆದರೆ ತೇಜಸ್ವಿ ಸೂರ್ಯ, ಮೋಹನ್ ದಾಸ್ ಪೈ ಬಂಡವಾಳ ಶಾಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ನಷ್ಟದಲ್ಲಿ ವಾಹನಗಳನ್ನು ಓಡಿಸಲ್ಲ. ಆದರೆ, ಸರಕಾರ ಲಾಭದ ಉದ್ದೇಶದಿಂದ ಸಾರಿಗೆ ಸಂಸ್ಥೆ ನಡೆಸುವುದಿಲ್ಲ. ಬಿಎಂಟಿಸಿಯಲ್ಲಿ ಪ್ರತಿನಿತ್ಯ 48ಲಕ್ಷ ಪ್ರಯಾಣಿಕರು ಓಡಾಡುತ್ತಾರೆ ಎಂದು ಅವರು ವಿವರಿಸಿದರು.

ಬೆಂಗಳೂರು ನಗರದ ಜನಸಂಖ್ಯೆ ಅಂದಾಜು 1.44 ಕೋಟಿ. ಬಿಎಂಟಿಸಿ ಬಸ್‍ಗಳನ್ನು ಈ ಪೈಕಿ 1/3 ನೇ ಭಾಗದಷ್ಟು ಜನರು ಬಳಸುತ್ತಿದ್ದಾರೆ. ಬೆಂಗಳೂರಿನಲ್ಲಿ 7067 ಬಸ್‍ಗಳು ಇವೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಸರಕಾರಿ ಸಾರಿಗೆ ಬಸ್‍ಗಳು ಇವೆ. ಆದರೆ ಬಿಎಂಟಿಸಿ ಬೇಡ ಎನ್ನುವ ಮೂಲಕ ಸಾರಿಗೆ ಸಂಸ್ಥೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಬೀದಿಪಾಲು ಮಾಡುವ ಮನಸ್ಥಿತಿ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸೆಂಬರ್‌ ಲ್ಲಿ ಸಂಪುಟ ಪುನರ್ ರಚನೆ: ‘ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಬಹುದು. ನಮ್ಮಲ್ಲಿ 7ರಿಂದ 8 ಮಂದಿ ಹಿರಿಯ ಶಾಸಕರಿದ್ದಾರೆ, ಅವರಿಗೂ ಅವಕಾಶ ಕೊಡಬೇಕಲ್ಲವೇ?’

-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News