ಸರಕಾರಿ ಸೇವಾ ನಿಯಮ ಉಲ್ಲಂಘಿಸುವವರಿಗೆ ಬಿಜೆಪಿ ಸಂಸದರಿಂದ ಬೆಂಬಲ: ಸಚಿವ ಪ್ರಿಯಾಂಕ ಖರ್ಗೆ ಆಕ್ರೋಶ
ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಪಿಡಿಒ ಬೆಂಬಲಿಸಿದ್ದ ತೇಜಸ್ವಿ ಸೂರ್ಯ
ಬೆಂಗಳೂರು: ಸರಕಾರಿ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸರ್ಕಾರಿ ನೌಕರರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಬಲ ನೀಡುತ್ತಿರುವುದು ಆತಂಕಕಾರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ನ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಾನತುಗೊಂಡ ಪಿಡಿಒ ಬೆಂಬಲಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡ ಅಧಿಕಾರಿಯೊಂದಿಗೆ ನಾನು ಮಾತನಾಡಿದ್ದೇನೆ. ಈ ಕಾನೂನುಬಾಹಿರ ಅಮಾನತನ್ನು ಪ್ರಶ್ನಿಸಲು ಸಂಬಂಧಪಟ್ಟ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಲ್ಲಿ ನಾನು ವೈಯಕ್ತಿಕವಾಗಿ ಹಾಜರಾಗುವ ಭರವಸೆ ನೀಡಿದ್ದೇನೆ,” ಎಂದು ಹೇಳಿದ್ದರು.
“ಸರ್ಕಾರಿ ನೌಕರರು ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಹಲವು ಹೈಕೋರ್ಟ್‌ಗಳು ಈಗಾಗಲೇ ತಮ್ಮ ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ. ಈ ಅಮಾನತನ್ನು ಕಾನೂನುಬಾಹಿರವೆಂದು ಘೋಷಿಸಿ ರದ್ದುಗೊಳಿಸಲಾಗುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸಿದ್ದರಾಮಯ್ಯ ಸರ್ಕಾರ ಕಾನೂನು ಹೋರಾಟ ಬಯಸಿದರೆ, ನಾವು ಅದಕ್ಕೆ ತಕ್ಕ ಹೋರಾಟ ನೀಡಲು ಸಿದ್ಧರಾಗಿದ್ದೇವೆ,” ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ರಾಜ್ಯ ಸರ್ಕಾರವು ನಿಗದಿಪಡಿಸಿದ ಸೇವಾ ನಿಯಮಗಳನ್ನು ಉಲ್ಲಂಘಿಸುವ ಜನರನ್ನು ಬಿಜೆಪಿ ಸಂಸದರು ಮುಂದೆ ಬಂದು ಸಮರ್ಥಿಸುತ್ತಿರುವುದು ಆಸಕ್ತಿದಾಯಕವಾಗಿದೆ. ಇದು ನನ್ನ ಮಾತನ್ನು ಸಾಬೀತುಪಡಿಸುತ್ತದೆ", ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಪೋಸ್ಟ್ ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ನೌಕರರ ರಾಜಕೀಯ ತಟಸ್ಥತೆಯ ಕುರಿತ ಸೇವಾ ನಿಯಮಗಳ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ನಿಯಮ ಪ್ರಕಾರ ಯಾವುದೇ ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿರಬಾರದು ಅಥವಾ ಯಾವುದೇ ರೀತಿಯ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಪ್ರತಿ ಸರ್ಕಾರಿ ನೌಕರರು ತಮ್ಮ ಕುಟುಂಬದ ಸದಸ್ಯರು ಸರ್ಕಾರದ ವಿರುದ್ಧ ನಡೆಯುವ ಚಟುವಟಿಕೆಯಲ್ಲಿ ಭಾಗವಹಿಸದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರು ಅದನ್ನು ತಡೆಯಲು ಸಾಧ್ಯವಾಗದಿದ್ದರೆ ತಕ್ಷಣ ನಿಗದಿತ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಯಾವುದೇ ಸಂಘಟನೆ ಅಥವಾ ಚಟುವಟಿಕೆಯು ರಾಜಕೀಯ ಸ್ವರೂಪದ್ದು ಎಂಬ ವಿವಾದ ಉಂಟಾದಲ್ಲಿ ಅಂತಿಮ ನಿರ್ಧಾರ ಸರ್ಕಾರದ್ದಾಗಿರುತ್ತದೆ, ಎಂದು ಸಚಿವರು ತಿಳಿಸಿದ್ದಾರೆ.