×
Ad

ಕ್ರಿಮಿನಲ್‍ಗಳ ಜೊತೆ ಪೊಲೀಸರು ಗುರುತಿಸಿಕೊಂಡರೆ ಕಠಿಣ ಕ್ರಮ : ಸೀಮಂತ್ ಕುಮಾರ್ ಸಿಂಗ್

Update: 2025-09-12 20:54 IST

ಸೀಮಂತ್ ಕುಮಾರ್ ಸಿಂಗ್ | PC : x/@praveen3537

ಬೆಂಗಳೂರು, ಸೆ.12 : ಕ್ರಿಮಿನಲ್‍ಗಳ ಜೊತೆ ಪೊಲೀಸರು ಗುರುತಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚಕೆ ನೀಡಿದ್ದಾರೆ.

ಶುಕ್ರವಾರ ನಗರದ ಥಣಿಸಂದ್ರದ ಸಿಎಆರ್ ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಪರೇಡ್‍ನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ರಿಮಿನಲ್‍ಗಳ ಜೊತೆ ಸೇರಿಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ಯಾವ ಕಾರಣಕ್ಕೂ ಅಂತಹ ಸಿಬ್ಬಂದಿಯನ್ನು ಬಿಡುವುದಿಲ್ಲ, ಪೊಲೀಸ್ ಇಲಾಖೆಗೆ ಸೇರಿದ್ದೀರಿ, ಒಂದು ತಂಡವಾಗಿ ಉತ್ತಮ ಕೆಲಸ ಮಾಡಬೇಕು ಎಂದರು.

ಇತ್ತೀಚೆಗೆ ಬಂದೋಬಸ್ತ್‌ ಗಳಲ್ಲಿ ಯಾರೂ ಕೂಡ ಹೆಲ್ಮೆಟ್ ಹಾಗೂ ಲಾಠಿ ತೆಗೆದುಕೊಂಡು ಹೋಗದಿರುವುದನ್ನು ಗಮನಿಸಿದ್ದೇನೆ. ಕಾಟಾಚಾರಕ್ಕೆ ನಿಂತರೆ ಆಗುವುದಿಲ್ಲ. ಪ್ರತಿ ಹಂತದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅತಿಮುಖ್ಯ. ಅಧಿಕಾರಿಗಳು ಬಂದೋಬಸ್ತ್ ಕರ್ತವ್ಯಕ್ಕೆ ಹೋಗುವ ಸಿಬ್ಬಂದಿಯನ್ನು ತಪಾಸಣೆ ಮಾಡಿ ಕಳುಹಿಸಬೇಕು ಎಂದು ಅವರು ಹೇಳಿದರು.

ಗೃಹ ಇಲಾಖೆಯಿಂದ ಪೊಲೀಸ್ ಇಲಾಖೆಗೆ ಸೌಲಭ್ಯಗಳು ಬರುತ್ತಿದ್ದು, ಪೊಲೀಸ್ ಸಿಬ್ಬಂದಿಗಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದೇ ರೀತಿ ನಿಷ್ಠೆ ಯಿಂದ ಸೇವೆ ಸಲ್ಲಿಸಿ ಬೆಂಗಳೂರು ನಗರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಬೇಕು. ವೃತ್ತಿ ಆಧಾರಿತ ಹಾಗೂ ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸಬೇಕು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಗಾಗಿ ‘ಖುಷಿ ಅಭಿಯಾನ’ ಆರಂಭವಾಗಿದೆ. ಎಲ್ಲಾ ಸಿಬ್ಬಂದಿಯೂ ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಯಾದರೆ ಮೂರು ತಿಂಗಳಿಗೊಮ್ಮೆ ಈ ಅಭಿಯಾನವನ್ನು ಮಾಡಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News