×
Ad

ಲೈಂಗಿಕ ಹಗರಣ | ತನಿಖೆಗೆ ಸ್ಪಂದಿಸದ ಪ್ರಜ್ವಲ್ : ನಾಳೆ ಕೋರ್ಟ್‌ಗೆ ಹಾಜರು

Update: 2024-06-05 21:31 IST

ಪ್ರಜ್ವಲ್ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ತನಿಖಾಧಿಕಾರಿಗಳ ವಿಚಾರಣೆಗೆ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದ್ದು, ಈ ನಡುವೆ ಕಸ್ಟಡಿ ಅಂತ್ಯವಾಗಿರುವ ಹಿನ್ನೆಲೆ ಗುರುವಾರ(ಜೂ.6) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮೇ.31ರಂದು ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ಅವರನ್ನು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜೂನ್ 6ರ ವರೆಗೆ ಪ್ರಜ್ವಲ್ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು.

ಗುರುವಾರ ಪ್ರಜ್ವಲ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಕರೆದೊಯ್ಯಲಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಯಲಿದೆ. ಎಸ್‌ಐಟಿ ಕಸ್ಟಡಿಗೆ ಜೂ.6ರಂದು ಅಂತಿಮ ದಿನವಾಗಿರುವುದರಿಂದ ವೈದ್ಯಕೀಯ ಪರೀಕ್ಷೆ ಬಳಿಕ ಹಾಸನದ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆಯಿದೆ.

ಆನಂತರ ನ್ಯಾಯಾಲಯದ ಮುಂದೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಲಿದ್ದು, ಇದುವರೆಗಿನ ವಿಚಾರಣೆಗೆ ಪ್ರಜ್ವಲ್ ಸಹಕಾರ ನೀಡಿಲ್ಲದಿರುವುದರಿಂದ ತನಿಖೆ ವಿಳಂಬವಾಗುತ್ತಿದ್ದು, ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಿಸುವಂತೆ ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News