ಯತ್ನಾಳ್‍ಗೆ ಮತ್ತೊಂದು ಸವಾಲು ಹಾಕಿದ ಶಿವಾನಂದ ಪಾಟೀಲ್
ಶಿವಾನಂದ ಪಾಟೀಲ್ / ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ, ಖಾಲಿ ಪತ್ರದಲ್ಲಿಯೇ ಸಹಿ ಮಾಡಿ ಕೊಡುತ್ತೇನೆ. ಆದರೆ, ನನಗೆ ಸವಾಲು ಹಾಕಿರುವ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ನೀಡುತ್ತಾರಾ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮತ್ತೊಂದು ಸವಾಲು ಹಾಕಿದ್ದಾರೆ.
ಮಂಗಳವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೆಟರ್ ಹೆಡ್‍ನಲ್ಲಿ ನಾನು ಕೇವಲ ಸಹಿ ಮಾಡಿ ಕೊಡುತ್ತೇನೆ, ನೀವೇ ರಾಜೀನಾಮೆ ವಿಷಯ ಬರೆದು ಸಭಾಧ್ಯಕ್ಷರಿಗೆ ಕೊಡಿ. ಅದೇ ರೀತಿ ಸವಾಲು ಹಾಕಿರುವ ಯತ್ನಾಳ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಷ್ಟೇ ಮಾತ್ರವಲ್ಲದೆ, ಸಭಾಪತಿಗಳು ಬೇಕಾದರೆ ಮೊದಲು ನನ್ನ ರಾಜೀನಾಮೆ ಅಂಗೀಕರಿಸಿ, ನಂತರ ಯತ್ನಾಳ ರಾಜೀನಾಮೆ ಅಂಗೀಕರಿಸಲಿ ಎಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಈ ರೀತಿ ಸವಾಲು ಹಾಕಿದ ಮೇಲೆ ಸ್ವೀಕರಿಸಿ ಮುನ್ನಡೆಯಬೇಕು. ಇಲ್ಲವೇ ಸುಮ್ಮನೇ ಇರಬೇಕು ಎಂದು ಎಚ್ಚರಿಕೆ ನೀಡಿದ ಅವರು, ಸಾರ್ವಜನಿಕವಾಗಿ ಬಳಸಲು ಸಾಧ್ಯವಿಲ್ಲದ ಪದ ಬಳಸಿ ಸವಾಲು ಹಾಕಿದ್ದು ಯತ್ನಾಳ್ ಅವರೇ ಹೊರತು ನಾನಲ್ಲ. ರಾಜೀನಾಮೆ ನೀಡುವ ಮೂಲಕ ನಾನು ನನ್ನ ಉದ್ದೇಶವನ್ನು ವ್ಯಕ್ತಪಡಿಸಿದ್ದೇನೆ. ಯತ್ನಾಳ್ ಹಾಕಿದ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ, ಈಗಲೂ ನಾನು ರಾಜೀನಾಮೆಗೆ ಬದ್ಧ ಎಂದು ತಿಳಿಸಿದರು.
ಯತ್ನಾಳ್ ವಿರುದ್ಧ ಜಿಲ್ಲೆಯ ಮುಸ್ಲಿಮ್ ಮುಖಂಡರು ಆಯೋಜಿಸಿರುವ ಪ್ರತಿಭಟನಾ ಸಭೆಗೆ ಸಚಿವ ಎಂ.ಬಿ.ಪಾಟೀಲರು ಪಾಲ್ಗೊಂಡಿಲ್ಲದರ ಬಗ್ಗೆ ಪ್ರಸ್ತಾಪಿಸಿದ್ದೆ ಹೊರತು ಎಂ.ಬಿ.ಪಾಟೀಲ ವಿರುದ್ಧ ನಾನು ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ಈ ಬಗ್ಗೆ ಅವರು ನನ್ನ ವಿರುದ್ಧ ಹೈಕಮಾಂಡ್‍ಗೆ ದೂರು ಕೊಡುವುದಾರೆ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವರು ನುಡಿದರು.