×
Ad

‘ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ’ : ಶಿವಾನಂದ ಪಾಟೀಲ್ ವಿರುದ್ಧ ಯತ್ನಾಳ್ ಆಕ್ರೋಶ

Update: 2025-05-02 21:43 IST

ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು : ‘ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ’ ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಉತ್ತರನ ಪೌರುಷ ಒಲೆಯ ಮುಂದೆ. ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ನೀಡಿ ರಾಜೀನಾಮೆ ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಇವರು ರಾಜೀನಾಮೆ ಕೊಡುವುದು, ವಿಧಾನಸಭಾ ಸ್ಪೀಕರ್ ಅವರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ರೀತಿಯಾದ ರಾಜೀನಾಮೆ ಸ್ವೀಕೃತವಾಗುವುದಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಾಗಿತ್ತು. ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.

‘ರಾಜೀನಾಮೆ ಸರಿಯಾದ ವಿಧಾನದಲ್ಲಿಲ್ಲ ಎಂದು ಸ್ವೀಕರಿಸುವ ವೇಳೆಯಲ್ಲೇ ಸ್ಪೀಕರ್ ಖಾದರ್ ಅವರು ಹೇಳಬೇಕಾಗಿತ್ತು. ನೀವು ಮಾಡುತ್ತಿರುವ ನಾಟಕವನ್ನು ಪ್ರಜ್ಞಾವಂತ ಮತದಾರರು, ಕ್ಷೇತ್ರದ ಜನತೆ ಗಮನಿಸಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಮರೆಯದಿರಿ’ ಎಂದು ಯತ್ನಾಳ್ ಇದೇ ವೇಳೆ, ಶಿವಾನಂದ ಪಾಟೀಲ್‍ಗೆ ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News