ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ
ಬೆಂಗಳೂರು, ಅ.4: ರಾಜ್ಯದ ಎಲ್ಲ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಈಗಾಗಲೇ ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಸಾರ್ವಜನಿಕರು ಸ್ವಯಂ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು https://kscbcselfdeclaration.karnataka.gov.in/ ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸ್ವಯಂ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಲಿಂಕ್‍ನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ನಾಗರಿಕ ಎಂಬುದನ್ನು ಆಯ್ಕೆ ಮಾಡಿದಲ್ಲಿ ಲಾಗಿನ್ ನಲ್ಲಿ ಮುಂದುವರಿಯಲು ಕೋರಲಾಗುತ್ತದೆ. ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ, ಮೊಬೈಲ್‍ಗೆ ಒಟಿಪಿ ಬರಲಿದ್ದು ಅದನ್ನು ದಾಖಲು ಮಾಡಬೇಕು.
ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೇಯ ಸ್ಥಿತಿಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕು. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕರ್‍ನಲ್ಲಿರುವ ಯುಎಚ್‍ಐಡಿ ಸಂಖ್ಯೆಯನ್ನು ದಾಖಲಿಸಿ ಸ್ಕ್ರೀನ್‍ನಲ್ಲಿ ಕೋರುವ ಮಾಹಿತಿಗಳನ್ನು ದಾಖಲು ಮಾಡಬೇಕು.
ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತರನರಾಗಿದ್ದರೆ ಯುಐಡಿ ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದು. ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್‍ಗೆ ಸಂದೇಶ ಬರಲಿದೆ ಎಂದು ಪ್ರಕಟನೆ ತಿಳಿಸಿದೆ.