×
Ad

ಒಂದು ಭಾಷೆ ಸಂಸ್ಕೃತಿಯ ಪ್ರತಿಬಿಂಬ, ಎಲ್ಲ ಭಾಷೆಗಳನ್ನು ಕಲಿಯುವ ದೊಡ್ಡ ಗುಣ ಬೆಳೆಸಿಕೊಳ್ಳಬೇಕು : ಸ್ಪೀಕರ್ ಯು.ಟಿ.ಖಾದರ್

2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

Update: 2025-11-30 19:24 IST

ಬೆಂಗಳೂರು : ಯುವ ಜನಾಂಗಕ್ಕೆ ಗ್ರಾಮೀಣ ಭಾಷೆಗಳನ್ನು ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಅರೆಭಾಷೆಯನ್ನು ಕಡ್ಡಾಯವಾಗಿ ಕಲಿಯಲು ಮತ್ತು ಮಾತನಾಡಲು ಪ್ರೇರಣೆ ನೀಡಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ವತಿಯಿಂದ ಆಯೋಜಿಸಿದ್ದ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರಾವಳಿ ವಿಶಿಷ್ಟವಾದದ್ದು, ಅಲ್ಲಿ ಬೇರೆ ಬೇರೆ ಭಾಷೆಗಳಿವೆ. ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಸೇರಿ ಯಾವ ಭಾಷೆಗಳಿಗೂ ಲಿಪಿ ಇಲ್ಲ. ಲಿಪಿ ಇಲ್ಲದಿದ್ದರೂ ಕೂಡ ಸಾವಿರಾರರು ವರ್ಷ ಉಳಿಸಿಕೊಂಡು ಬಂದಿರುವುದು ನಮ್ಮ ಜಿಲ್ಲೆಯ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಒಂದು ಭಾಷೆ ಉಳಿದರೆ ಮಾತ್ರ ಆ ಸಮಾಜದ ಸಂಸ್ಕೃ ತ ಮತ್ತು ಆಚಾರ-ವಿಚಾರ ಉಳಿಯುತ್ತದೆ. ಒಂದು ಭಾಷೆ ಸಂಸ್ಕೃತಿಯ ಪ್ರತಿಬಿಂಬ, ಎಲ್ಲ ಭಾಷೆಗಳನ್ನು ಕಲಿಯುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು. ಇನ್ನೊಂದು ಭಾಷೆಯನ್ನು ಧ್ವೇಷಿಸಿದರೆ, ದೂರ ಮಾಡಿದರೆ, ನಮ್ಮ ಭಾಷೆ ಬೆಳೆಯುವುದಿಲ್ಲ. ನಮ್ಮ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡು ಬೇರೆ ಭಾಷೆಗಳಿಗೆ ಗೌರವ ನೀಡಬೇಕು ಎಂದು ಖಾದರ್ ಸಲಹೆ ನೀಡಿದರು.

ಅಧಿಕಾರ ಸಿಕ್ಕಾಗ ಕೆಲಸ ಮಾಡಬೇಕು. ಅಧಿಕಾರ ಹೋದಾಗ ನಾವು ಮಾಡಿರುವ ಕೆಲಸವನ್ನು ಹೇಳಬಹುದು. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡಮಿಯ ಅಧ್ಯಕ್ಷರು ಕೆಲಸ ಮಾಡಬೇಕು. ಅರೆಭಾಷೆಗೆ ಪೂರಕವಾದ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ನುಡಿದರು.

ಎಲ್ಲಿ ಸಾಮರಸ್ಯ ಇರುತ್ತದೆಯೋ ಅಲ್ಲಿ ನೆಮ್ಮದಿ ಇರುತ್ತದೆ. ಎಲ್ಲಿ ನೆಮ್ಮದಿ ಇರುತ್ತೋ ಅಲ್ಲಿ ಅಭಿವೃದ್ಧಿಯಾಗುತ್ತದೆ. ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದೆ ನಿಂತು ಕೆಲಸ ಮಾಡಬೇಕು. ಭಿನ್ನಾಭಿಪ್ರಾಯ ಇದ್ದರೂ ಸಾಮಾರಸ್ಯ ಇರಬೇಕು. ಎಲ್ಲ ಭಿನ್ನಾಭಿಪ್ರಾಯಗಳನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಪರಸ್ಪರ ಚರ್ಚೆಮಾಡಿ ಅರ್ಥ ಮಾಡಿಕೊಂಡು ಎಲ್ಲರೂ ಭಾರತೀಯರು ಎಂದು ಮುಂದೆ ಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News