×
Ad

ಕಾಲ್ತುಳಿತ ಪ್ರಕರಣ | ಬಿ.ದಯಾನಂದ್ ಸಹಿತ ಇಬ್ಬರು ಅಧಿಕಾರಿಗಳ ಹೇಳಿಕೆ ದಾಖಲು

Update: 2025-06-27 19:29 IST

ಸಾಂಂದರ್ಭಿಕ ಚಿತ್ರ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮುಂದಿನ ವಾರವೇ ಸರಕಾರಕ್ಕೆ ವರದಿಯನ್ನು ಸಲ್ಲಿಸಲು ತನಿಖೆ ಚುರುಕುಗೊಳಿಸಿರುವ ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ.ಜಗದೀಶ್, ಪ್ರಕರಣದಲ್ಲಿ ಅಮಾನತುಗೊಂಡಿದ್ದ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಜೂ.26ರಂದು ವಿಚಾರಣೆ ನಡೆಸಿದ್ದಾರೆ.

ಈ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ಈ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಹೇಳಿಕೆ ನೀಡಲು ಅಧಿಕಾರಿಗಳು ಸಮಯಾವಕಾಶ ಪಡೆದುಕೊಂಡಿದ್ದರು. ಜೂ.26ರ ಗುರುವಾರ ಬರುವಂತೆ ಮತ್ತೆ ನೋಟಿಸ್ ಜಾರಿ ಹಿನ್ನೆಲೆಯಲ್ಲಿ, ಹಾಜರಾದ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಲಾಯಿತು.

ಕಾಲ್ತುಳಿತ ಘಟನೆಗೆ ಏನು ಕಾರಣ? ಆರ್‍ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡದಿದ್ದರೂ ಅನುವು ಮಾಡಿಕೊಟ್ಟಿದ್ದೇಕೆ? ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಎಷ್ಟು? ನಿರೀಕ್ಷೆಗೂ ಮೀರಿ ಜನರು ಜಮಾವಣೆಗೊಂಡಿದ್ದರೂ ಪ್ರವೇಶದ್ವಾರದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸದಿರುವುದಕ್ಕೆ ಕಾರಣವೇನು? ಎಂಬುದು ಸೇರಿದಂತೆ ತನಿಖಾಧಿಕಾರಿಗಳು ಕೇಳಿದ ಹತ್ತಾರು ಪ್ರಶ್ನೆಗಳಿಗೆ ದಾಖಲೆ ಸಮೇತ ಬಿ.ದಯಾನಂದ್ ಅವರು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಮುಂದಿನ ವಾರ ವರದಿ ಸಲ್ಲಿಸುವ ಸಾಧ್ಯತೆ?: ಕಾಲ್ತುಳಿತ ಪ್ರಕರಣದ ತನಿಖಾ ವರದಿ ನೀಡಲು ಸರಕಾರ ನೀಡಿದ್ದ 15 ದಿನಗಳ ಗಡುವು ವಿಸ್ತರಣೆಗೆ ಅನುಮತಿ ಪಡೆದುಕೊಂಡಿದ್ದ ತನಿಖಾಧಿಕಾರಿ ಜಿ.ಜಗದೀಶ್ ಮುಂದಿನ ವಾರವೇ ವರದಿಯನ್ನು ಸರಕಾರಕ್ಕೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖಾಧಿಕಾರಿ ಜಿ.ಜಗದೀಶ್ ಅವರು ಈ ಪ್ರಕರಣದ ವಿಚಾರಣೆಯ ಕೊನೆಯ ಭಾಗವಾಗಿ ಜೂ.27ರ ಶುಕ್ರವಾರದಂದು ಪ್ರತ್ಯಕ್ಷದರ್ಶಿಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರ ವಿಡಿಯೋ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಾಮರ್ಶೆ ನಡೆಸಲಾಗಿದೆ. ಆರ್‍ಸಿಬಿ, ಡಿಎನ್‍ಎ ಹಾಗೂ ಕೆಎಸ್‍ಸಿಎ ಮುಖ್ಯಸ್ಥರು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ. ವಿಜಯೋತ್ಸವ ದಿನದಂದು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಹಿರಿಯ ಕಾನೂನು ಸುವ್ಯವಸ್ಥೆ ಪೊಲೀಸರು ಹಾಗೂ ಸಂಚಾರ ಪೊಲೀಸರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News