ಬೆಂಗಳೂರು ಕಾಲ್ತುಳಿತ ಪ್ರಕರಣ; ನಿವೃತ್ತ ನ್ಯಾ.ಕುನ್ಹಾ ಆಯೋಗದ ವರದಿ ಹೈಕೋರ್ಟ್‌ಗೆ ಸಲ್ಲಿಸಿದ ಸರಕಾರ
ಬೆಂಗಳೂರು : ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ವಿಚಾರಣಾ ಆಯೋಗದ ವರದಿಯ ಪ್ರತಿಯನ್ನು ರಾಜ್ಯ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿತು.
ನ್ಯಾ. ಕುನ್ಹಾ ಆಯೋಗದ ವರದಿ ರದ್ದು ಕೋರಿ ಡಿಎನ್‌ಎ ಎಂರ್ಟೇನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸರಕಾರದ ಪರ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ನ್ಯಾ. ಕುನ್ಹಾ ಅವರ ವರದಿಯ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ನ್ಯಾಯಪೀಠ, ಡಿಎನ್‌ಎ ಪರವಾಗಿ ಜುಲೈ 4ರಂದು ಆಯೋಗದ ಮುಂದೆ ಹಾಜರಾಗಿರುವ ಕಿರಣ್ ಕುಮಾರ್ ಯಾರು? ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಕಿರಣ್ ಕುಮಾರ್ ಡಿಎನ್‌ಎ ಸಂಸ್ಥೆಯ ಉದ್ಯೋಗಿ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾ.ಕುನ್ಹಾ ಆಯೋಗದ ಮುಂದೆ ಹಾಜರಾಗಲು ಕಿರಣ್ ಕುಮಾರ್‌ಗೆ ಡಿಎನ್‌ಎ ಸಂಸ್ಥೆ ಅನುಮತಿ ನೀಡಿತ್ತೇ ಎಂದು ಮರು ಪ್ರಶ್ನೆ ಹಾಕಿತು.
ಡಿಎನ್ ಪರ ವಕೀಲರು, ಆ ಕುರಿತು ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.