×
Ad

ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚಿಸಿದ ರಾಜ್ಯ ಸರಕಾರ

Update: 2025-08-03 19:38 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ಘಟಕವನ್ನು ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕಾರ್ಯಪಡೆಯು ಡಿಜಿ-ಐಜಿಪಿ ಅವರ ನಿಗಾವಣೆಯಲ್ಲಿ ಕೆಲಸ ಮಾಡಲಿದೆ. ಅಲ್ಲದೆ, ಈ ಕಾರ್ಯಪಡೆಯ ಕಾರ್ಯವರದಿಯನ್ನು ಸೈಬರ್ ಕಮಾಂಡ್ ಡಿಜಿ ಅವರಿಗೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಕಾರ್ಯಪಡೆಯ ಸಮರ್ಪಕ ಕಾರ್ಯನಿರ್ವಹಣೆಗಾಗಿ ಹೊಸದಾಗಿ 10 ಹುದ್ದೆಗಳನ್ನು ಸೃಜಿಸಲಾಗುತ್ತಿದೆ. ಆ ಹುದ್ದೆಗಳ ಪೈಕಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಸಹಾಯಕ ಪೊಲೀಸ್ ಆಯುಕ್ತರ ತಲಾ 2 ಹುದ್ದೆ, ಸಹಾಯಕ ಆಡಳಿತಾಧಿಕಾರಿ, ಶಾಖಾಧೀಕ್ಷಕ, ಕಿರಿಯ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಶೀಘ್ರ ಲಿಪಿಗಾರ ಮತ್ತು ದಲಾಯತ್ ತಲಾ 1 ಹುದ್ದೆ ಸೃಷ್ಟಿಸಲು ನಿರ್ದೇಶಿಸಲಾಗಿದೆ.

ಉಳಿದಂತೆ ನಕ್ಸಲ್ ನಿಗ್ರಹ ಕಾರ್ಯಪಡೆಯಿಂದ ಪಿಐ(ಸಿವಿಲ್) 2 ಹುದ್ದೆ, ಪಿಎಸ್‍ಐ(ಸಿವಿಲ್) 4 ಹುದ್ದೆ, ಮುಖ್ಯ ಪೇದೆ 20 ಹಾಗೂ 30 ಪೇದೆ ಹುದ್ದೆಗಳನ್ನು ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ವರ್ಗಾಯಿಸಲು ಸರಕಾರದ ಅಧೀನ ಕಾರ್ಯದರ್ಶಿ ಕೆ.ಎನ್.ವನಜ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News