ರಾಜ್ಯ ಸಾರಿಗೆ ನೌಕರರ ಮುಷ್ಕರ: ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ
ವೇತನ ಪರಿಷ್ಕರಣೆ ಸಹಿತ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಬೆಂಗಳೂರು, ಆ. 5: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದು, ಕೆಎಸ್ಸಾರ್ಟಿಸಿ ಬಸ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳು, ಕಚೇರಿಗೆ ತೆರಳುವ ನೌಕರರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ.
ಬಿಎಂಟಿಸಿ ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ಬೆಂಗಳೂರಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಜನರು ಖಾಸಗಿ ವಾಹನಗಳನ್ನು ಆಶ್ರಯಿಸುತ್ತಿರುವುದು ಕಂಡುಬಂದಿದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಚಿತ್ರದುರ್ಗ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಬಸ್ ನಿಲ್ದಾಣಗಳಲ್ಲಿ ರಾಜ್ಯ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಜನರು ಖಾಸಗಿ ಬಸ್ಗಳು, ಆಟೋ ರಿಕ್ಷಾ ಹಾಗೂ ಕ್ಯಾಬ್ ಗಳಿಗತ್ತ ಮುಖ ಮಾಡುತ್ತಿದ್ದಾರೆ.
ರಾಜ್ಯ ಸಾರಿಗೆ ನಿಗಮಗಳ ನೌಕರರು ವಿವಿಧ ಬೇಡಿಕೆಗಳೊಂದಿಗೆ ಮುಷ್ಕರ ಆರಂಭಿಸಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಪಾವತಿ ಪಾವತಿಸುವಂತೆ ಆಗ್ರಹಿಸಿದ್ದಾರೆ. 2020ರ ಜನವರಿ 1 ರಿಂದ ಶೇ.15ರಷ್ಟು ವೇತನ ಪರಿಷ್ಕರಣೆ ಆಗಿರುವುದನ್ನು ಸರಕಾರ ಈವರೆಗೆ ಅನುಷ್ಠಾನಗೊಳಿಸದೆ ಬಾಕಿ ಉಳಿಸಿದೆ ಎಂದು ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲ ವೇತನದಲ್ಲಿ ತುಟ್ಟಿ ಭತ್ತೆ ವಿಲೀನ ಮಾಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ರಾಜ್ಯ ಸಾರಿಗೆ ನೌಕರರು ಸರಕಾರದ ಮುಂದಿಟ್ಟಿದ್ದಾರೆ. ಅದರಂತೆ 2023ರ ಡಿಸೆಂಬರ್ 31ರ ವೇತನದ ಮೇಲೆ ಶೇ.31ರಷ್ಟು ತುಟ್ಟಿ ಭತ್ತೆ ವಿಲೀನ ಮಾಡಿ, 2024ರ ಜನವರಿ 1ರಿಂದ ಶೇ.25ರಷ್ಟು ವೇತನ ಹೆಚ್ಚಳ ನೀಡಬೇಕು ಎಂಬುದು ನೌಕರರ ಬೇಡಿಕೆ.
ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ಇತರ ಬೇಡಿಕೆಗಳನ್ನು ಸಾರಿಗೆ ನಿಗಮದ ಆಡಳಿತ ಮಟ್ಟದಲ್ಲಿ ಬಗೆಹರಿಸಬೇಕೆಂದು ನೌಕರರು ಸರ್ಕಾರವನ್ನು ಆಗ್ರಹಿಸಿದ್ದಾರೆ.