×
Ad

ಹಣ್ಣುಗಳ ಮೇಲಿನ ಸ್ಟಿಕ್ಕರ್ ಅಪಾಯಕಾರಿ: ಸಚಿವ ಶಿವಾನಂದ ಪಾಟೀಲ್

Update: 2025-06-23 21:25 IST

ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ಹಣ್ಣುಗಳ ಬ್ರಾಂಡ್‍ಗಳನ್ನು ಗುರುತಿಸಲು ಅವುಗಳ ಮೇಲೆ ಸ್ಟಿಕ್ಕರ್‍ಗಳನ್ನು ಹಚ್ಚುವುದು ಅಪಾಯಕಾರಿ ಆಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಸೋಮವಾರ ಕೇಂದ್ರದ ಕಾರ್ಬನ್ ಕ್ರೆಡಿಟ್ಸ್ ಅನುದಾನ ಬಳಕೆ ಬಗ್ಗೆ ದಿಲ್ಲಿಯ ಕೊಸ್ಯಾಂಬೋ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಎಸ್.ಯಾದವ್ ಅವರೊಂದಿಗೆ ತರಕಾರಿ ಮತ್ತು ಇತರ ತ್ಯಾಜ್ಯ ಬಳಕೆ ಮಾಡಿ ಬಯೋ ಸಿಎನ್‍ಜಿ ಪ್ಲಾಂಟ್‍ಗಳ ಸ್ಥಾಪನೆ ಕುರಿತು ಚರ್ಚಿಸಿದ ಬಳಿಕ ಅವರು ಮಾತನಾಡಿದರು.

ಹಣ್ಣುಗಳ ಪ್ಯಾಕಿಂಗ್ ಮಾಡಲು ಹಾನಿಕಾರಕ ರಾಸಾಯನಿಕ ಬಳಕೆ, ಸೇಬು ಸೇರಿದಂತೆ ಇತರ ಹಲವು ಹಣ್ಣುಗಳ ಬ್ರಾಂಡ್‍ಗಳನ್ನು ಗುರುತಿಸಲು ಅವುಗಳ ಮೇಲೆ ಸ್ಟಿಕ್ಕರ್‍ಗಳನ್ನು ಹಚ್ಚುವುದು ಅಪಾಯಕಾರಿ. ಇಂತಹ ಹಣ್ಣುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಬೇಕೆಂದು ಸಚಿವರು ಸೂಚಿಸಿದರು.

ರಾಜ್ಯದಲ್ಲಿ ಬೆಂಗಳೂರಿನ ದಾಸನಪುರ, ಮೈಸೂರು ಮತ್ತು ಕೋಲಾರಗಳಲ್ಲಿ ಈಗಾಗಲೇ ಬಯೋ ಸಿಎನ್‍ಜಿ ಪ್ಲಾಂಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.

ತರಕಾರಿ ಮತ್ತಿತರ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದನೆ ಮಾಡುವುದರಿಂದ ಪರಿಸರಕ್ಕೆ ವಿಷಕಾರಿ ಅನಿಲ ಸೇರ್ಪಡೆಯಾಗುವುದನ್ನು ತಡೆಗಟ್ಟಬಹುದು. ಘನ ತ್ಯಾಜ್ಯ ನಿರ್ವಹಣೆ ಕಾಯ್ದೆಗೆ ಕೇಂದ್ರ ಸರಕಾರ ಅಕ್ಟೋಬರ್‍ನಲ್ಲಿ ತಿದ್ದುಪಡಿ ತರಲಿದ್ದು, ಈ ಮೂಲಕ ಲಭ್ಯವಾಗುವ ನೆರವನ್ನು ಬಳಕೆ ಮಾಡಿಕೊಂಡು ಎಪಿಎಂಸಿಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್‍ಗಳನ್ನು ನಿರ್ಮಾಣ ಮಾಡುವುದು ಸೂಕ್ತ ಎಂದು ಡಾ.ಜೆ.ಎಸ್.ಯಾದವ್ ಸಲಹೆ ಮಾಡಿದರು.

ಪ್ರತಿದಿನ 50 ಟನ್ ಉತ್ಪಾದನೆ ಮಾಡಿದರೆ ಮಾತ್ರ ಈ ಯೋಜನೆ ಲಾಭದಾಯಕವಾಗಲಿದೆ. ಇದು ಲಾಭದಾಯಕ ಎಂದಾಗ ಮಾತ್ರ ಖಾಸಗಿಯವರೂ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಿಸಲು ಮುಂದೆ ಬರುತ್ತಾರೆ. ರಾಜ್ಯದ ಯಾವ ಯಾವ ಎಪಿಎಂಸಿಗಳಲ್ಲಿ ಪ್ರತಿದಿನ ಎಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಎಲ್ಲೆಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿದರೆ ಲಾಭದಾಯಕ ಎಂಬುದನ್ನು ಗುರುತಿಸಿ ಯೋಜನೆ ರೂಪಿಸುವಂತೆ ಅವರು ನುಡಿದರು.

ಆಹಾರ ಸುರಕ್ಷತೆ ಕಾಯ್ದೆಯಲ್ಲಿ ಈ ಎಲ್ಲ ಅಂಶಗಳು ಬರುತ್ತವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡಲು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕಲ್ಲಂಗಡಿ, ಬೆಂಡೆಕಾಯಿ, ಕ್ಯಾರೆಟ್ ಸೇರಿದಂತೆ ಕೆಲವು ಹಣ್ಣು, ತರಕಾರಿಗಳಿಗೆ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ.

ಗರಿಷ್ಠ ಪ್ರಮಾಣದಲ್ಲಿ ಕೀಟನಾಶಕ ಬಳಸುವುದೂ ಅಪಾಯಕಾರಿ. ಆದ್ದರಿಂದ ತರಕಾರಿಗೆ ಕೃತಕ ಬಣ್ಣ ಬಳಕೆ ಮತ್ತು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಕೀಟನಾಶಕ ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದರೆ ಭವಿಷ್ಯದ ದಿನಗಳಲ್ಲಿ ಆರೋಗ್ಯದ ಮೇಲೆ ಗರಿಷ್ಠ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ ಎನ್ನುವ ಅಂಶಗಳ ಬಗ್ಗೆ ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಧೀಕ್ಷಕ ಅಭಿಯಂತರ ರಘುನಂದನ್, ಕರ್ನಾಟಕ ಕೃಷಿ ಮಾರಾಟ ಮಹಾ ಮಂಡಳದ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News