ಒಳಮೀಸಲಾತಿ ಜಾರಿ ಬಳಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಮಧುಬಂಗಾರಪ್ಪ
ಬೆಂಗಳೂರು: ಒಳಮೀಸಲಾತಿ ಜಾರಿ ಬಳಿಕ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತಿದ್ದು, ಈ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. 6ರಿಂದ 10ನೇ ತರಗತಿಗೆ ದೈಹಿಕ ಶಿಕ್ಷಣ ಒಂದು ವಿಷಯವಾಗಿ ಸೇರಿಸಬೇಕೆಂದು 2006-07ರ ಸಾಲಿನಲ್ಲೇ ಅಂದಿನ ಸರಕಾರ ವರದಿಯನ್ನು ಒಪ್ಪಿದೆ ಎಂದರು.
ಒಳ ಮೀಸಲಾತಿ ವರದಿ ಜಾರಿ ಬಳಿಕ ಆಗುವ ನೇಮಕಾತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ದೈಹಿಕ ಶಿಕ್ಷಕರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೈಹಿಕ ಶಿಕ್ಷಕ ಹುದ್ದೆಗೆ ಅತಿಥಿ ಶಿಕ್ಷಕರ ನೇಮಕ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮಧುಬಂಗಾರಪ್ಪ ಹೇಳಿದರು.
ರಾಜ್ಯದ ಸರಕಾರಿ ಶಾಲೆಗಳಲ್ಲಿ ಶೇ.80ರಷ್ಟು ದೈಹಿಕ ಶಿಕ್ಷಕರಿಲ್ಲ. ದೈಹಿಕ ಶಿಕ್ಷಕರಿಲ್ಲದೆ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಹೇಗಾಗುತ್ತದೆ. ಸಮಾರೋಪಾದಿಯಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಒತ್ತಾಯಿಸಿದರು.