ಬಸವಣ್ಣ ‘ಲಿಂಗಾಯತ ಧರ್ಮ’ ಸ್ಥಾಪನೆ ಮಾಡಿದ್ದಕ್ಕೆ ದಾಖಲೆ ಇಲ್ಲ: ಶಾಸಕ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (File Photo)
ಬೆಳಗಾವಿ: ಬಸವಣ್ಣ ‘ಲಿಂಗಾಯತ ಧರ್ಮ’ವನ್ನು ಸ್ಥಾಪನೆ ಮಾಡಿದ್ದಾರೆ ಎಂಬುದಕ್ಕೆ ಯಾವುದೆ ದಾಖಲೆ ಇಲ್ಲ. ಅವರು ಶಿವನನ್ನು ಆರಾಧನೆ ಮಾಡುತ್ತಿದ್ದರು. ಅವರ ವಚನಗಳಲ್ಲಿಯೂ ಕೂಡಲ ಸಂಗಮ ದೇವ ಎಂದು ಉಲ್ಲೇಖ ಮಾಡುತ್ತಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬುಧವಾರ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮ್ಯುನಿಸ್ಟ್ ಮಾನಸಿಕತೆ ಹೊಂದಿರುವ ಕೆಲವು ಸ್ವಾಮಿಗಳು ಬಸವಣ್ಣನನ್ನು ತಮ್ಮ ಮನೆಯ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮಿಯನ್ನು ಉಚ್ಛಾಟನೆ ಮಾಡಲು ಸಾಧ್ಯವಿಲ್ಲ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‍ಗೂ ಕೂಡಲ ಸಂಗಮ ಪೀಠಕ್ಕೂ ಯಾವುದೆ ಸಂಬಂಧವಿಲ್ಲ. ಬಸವ ಜಯಮೃತ್ಯುಂಜಯ ಸ್ವಾಮಿ ಎಲ್ಲಾದರೂ ಆಸ್ತಿ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಯತ್ನಾಳ್ ಆಗ್ರಹಿಸಿದರು.
ಜಾತಿ ಗಣತಿ ವಿಚಾರದಲ್ಲಿಯೂ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಆರು ಧರ್ಮಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ. ಆದುದರಿಂದ, ಧರ್ಮದ ಕಾಲಂ ನಲ್ಲಿ ಹಿಂದೂ ಬರೆಸುವಂತೆ ಶ್ರೀಗಳು ಕರೆ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.