×
Ad

‘ಕಮಲ್ ಹಾಸನ್‌’ ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್' ಸಿನೆಮಾ ಬಿಡುಗಡೆಗೆ ಅವಕಾಶವಿಲ್ಲ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Update: 2025-05-29 19:39 IST

ಕಮಲ್ ಹಾಸನ್ | PC : PTI  

ಬೆಂಗಳೂರು : ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಾಳೆ(ಮೇ 30)ಯೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಕರ್ನಾಟಕದಲ್ಲಿ ‘ಥಗ್ ಲೈಫ್' ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‍ಸಿಸಿ) ಗುರುವಾರ ಹೇಳಿದೆ.

ಚಲನಚಿತ್ರ ಉದ್ಯಮದ ಪ್ರಮುಖರೊಂದಿಗೆ ನಡೆದ ಸಭೆಯ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ನರಸಿಂಹಲು, ‘ಅನೇಕ ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ಅವರ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿವೆ. ಅವರು ಕ್ಷಮೆ ಕೇಳಬೇಕೆಂದು ನಾವು ನಿರ್ಧರಿಸಿದ್ದೇವೆ. ಅವರು ಮಾಡಿದ್ದು ತಪ್ಪು ನಾವು ಒಪ್ಪುತ್ತೇವೆ. ಅವರನ್ನು ಭೇಟಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಕೆಎಫ್‍ಸಿಸಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ‘ಮೇ 30ರೊಳಗೆ ಕಮಲ್ ಹಾಸನ್ ಕ್ಷಮೆ ಯಾಚಿಸದಿದ್ದರೆ ಕೆಎಫ್‍ಸಿಸಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲʼ ಎಂದರು.

ಕಮಲ್ ಹಾಸನ್‍ಗೂ ಕನ್ನಡದ ಬಗ್ಗೆ ಪ್ರೀತಿ ಇದೆ: ಡಾ.ಶಿವರಾಜ್ ಕುಮಾರ್

ಕಮಲ್ ಹಾಸನ್ ಹಿರಿಯರು. ಯಾವುದು ಸರಿ ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಅದನ್ಯಾಕೆ ದೊಡ್ಡದು ಮಾಡ್ತೀರಾ’ ಎಂದು ನಟ ಡಾ.ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಕಮಲ್ ಹಾಸನ್ ಅವರು ಸಾಕಷ್ಟು ಕನ್ನಡ ಸಿನೆಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೊ ಅದನ್ನು ಅವರು ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ’ ಎಂದು ಹೇಳಿದರು.

‘ಚೆನ್ನೈಯಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಗೌರವದಿಂದ ಕರೆದಿದ್ದರು. ಅದೇ ಗೌರವದಿಂದ ನಾನೂ ಸಹ ಹೋಗಿದ್ದೆ. ವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಲ್ಲಿ ಬಂದು ನೋಡಿದಾಗ ವಿವಾದ ಆಗಿತ್ತು. ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಗೆ ಇರಬೇಕು’ ಎಂದರು.

‘ನಾವು ಕನ್ನಡಕ್ಕಾಗಿ ಹೋರಾಡುತ್ತೇವೆ, ಹೋರಾಡಿ ಸಾಯಲೂ ಸಿದ್ಧರಿದ್ದೇವೆ. ಕೇವಲ ಮಾತಿನಲ್ಲಿ ಪೋಸು ಕೊಡುವುದು ದೊಡ್ಡ ವಿಷಯ ಅಲ್ಲ. ಕನ್ನಡಕ್ಕೆ ಏನು ಮಾಡುತ್ತಿದ್ದೀವೆ ಎಂಬುದನ್ನು ನೀವೇ ಹುಡುಕಿ ನೋಡಿ, ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ ನಿಮಗೆ ಉತ್ತರ ಸಿಗುತ್ತದೆ ಎಂದು ಹೇಳಿದರು.

‘ಥಗ್‍ಲೈಫ್’ ಸಿನೆಮಾ ನಿಷೇಧಿಸುವಂತೆ ಕರವೇ ಆಗ್ರಹ: ‘ಜೂ. 5ರಂದು ಬಿಡುಗಡೆಯಾಗಲಿರುವ ಕಮಲ್ ಹಾಸನ್ ನಟನೆಯ ಥಗ್‍ಲೈಫ್ ಸಿನೆಮಾವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಿಯೋಗ ನಗರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಆಗ್ರಹ ಪತ್ರ ಸಲ್ಲಿಸಿತು.

ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ, ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ತಪ್ಪು ಮತ್ತು ದುರುದ್ದೇಶಪೂರಿತ ಹೇಳಿಕೆಯನ್ನು ನಟ ಕಮಲ್ ಹಾಸನ್ ನೀಡಿದ್ದಾರೆ. ಈ ಸುಳ್ಳು ಮತ್ತು ಆಧಾರ ರಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಎಂದು ನಿಯೋಗದ ಪತ್ರದಲ್ಲಿ ಉಲ್ಲೇಖಿಸಿದೆ.

ಈ ಸಂದರ್ಭದಲ್ಲಿ ಕರವೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಪ್ರಧಾನ ಸಂಚಾಲಕ ಮೋಹನ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News