ಹಾಸನ, ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ರಾಜ್ಯ ಸರಕಾರವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಹಲವು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿ ಹಾಗೂ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ದರ್ಶನ್ ಎಚ್.ವಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಆಡಳಿತ ವಿಭಾಗದ ನಿರ್ದೇಶಕಿಯಾಗಿದ್ದ ಟಿ.ಕೆ.ಸ್ವರೂಪ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ, ಬಾಗಲಕೋಟೆ ಜಿಲ್ಲಾಧಿಕಾರಿಯಾಗಿದ್ದ ಕೆ.ಎಂ.ಜಾನಕಿ ಅವರನ್ನು ರಾಜ್ಯ ಲೋಕಸೇವಾ ಆಯೋಗದ ಕಾರ್ಯದರ್ಶಿ, ಹಾಸನ ಜಿಲ್ಲಾಧಿಕಾರಿಯಾಗಿದ್ದ ಸತ್ಯಭಾಮ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕೆ.ಎಸ್.ಲತಾ ಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ರಾಷ್ಟ್ರೀಯ ಆರೋಗ್ಯ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ನಳಿನಿ ಅತುಲ್ ಅವರನ್ನು ಯೋಜನೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸಾಂಖ್ಯಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಸಂಗಪ್ಪ ಅವರನ್ನು ಬಾಗಲಕೋಟೆ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸುರೇಶ್ ಬಿ.ಇಟ್ನಾಳ್ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ, ರಾಷ್ಟ್ರೀಯ ಆರೋಗ್ಯ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯದ ನಿರ್ದೇಶಕ ಡಾ.ನವೀನ್ ಭಟ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಗರಿಮಾ ಪನ್ವರ್ ಅವರನ್ನು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರಾಹುಲ್ ರತ್ನಮ್ ಪಾಂಡೆ ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಕಾರ್ಯಕಾರಿ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಪ್ರಕಾಶ್ ಜಿ.ಟಿ.ನಿಟ್ಟಲಿ ಅವರನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಿರ್ದೇಶಕ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವರ್ನೀತ್ ನೇಗಿ ಅವರನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಾಗೂ ಬಾಗಲಕೋಟೆಯ ಆರ್ ಅಂಡ್ ಆರ್ ಪ್ರಧಾನ ವ್ಯವಸ್ಥಾಪಕ ಗಿಟ್ಟೆ ಮಾಧವ್ ವಿಠ್ಠಲ್ ರಾವ್ ಅವರನ್ನು ದಾವಣಗೆರೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.