ಧಾರ್ಮಿಕ ಆಚರಣೆ, ಹಬ್ಬ, ಉತ್ಸವಗಳಿಗೆ ಸಂಬಂಧಿಸಿದಂತೆ ಭಾವನೆಗೆ ಧಕ್ಕೆಯಾಗದಂತೆ ಕ್ರಮ: ಸಚಿವ ಚಲುವರಾಯಸ್ವಾಮಿ
ಧಾರ್ಮಿಕ ಆಚರಣೆಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತು ಸದನದಲ್ಲಿ ಚರ್ಚೆ
ಸಚಿವ ಎನ್.ಚಲುವರಾಯಸ್ವಾಮಿ
ಬೆಂಗಳೂರು: ‘ಧಾರ್ಮಿಕ ಆಚರಣೆ ಹಾಗೂ ಹಬ್ಬ, ಉತ್ಸವಗಳಿಗೆ ಸಂಬಂಧಿಸಿದಂತೆ ಕಾನೂನು ಪಾಲನೆ ಜೊತೆಗೆ ಸಂಪ್ರದಾಯದ ಭಾವನೆಗೆ ಧಕ್ಕೆಯಾಗದಂತೆ ಸರಕಾರ ಕ್ರಮ ಕೈಗೊಳ್ಳಲಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಪ್ರಸ್ತಾಪಿಸಿದ ವಿಷಯಕ್ಕೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಕಾಂಗ್ರೆಸ್-ಬಿಜೆಪಿ ಸರಕಾರದ ಪ್ರಶ್ನೆಯಲ್ಲ. ಯಾರೇ ಆಗಿದ್ದರೂ ಕಾನೂನು ಪಾಲನೆ ಮಾಡಬೇಕು. ರಾತ್ರಿ 10ಗಂಟೆಯ ನಂತರ ಚುನಾವಣಾ ಪ್ರಚಾರ, ಸಭೆ ಸಮಾರಂಭಗಳನ್ನು ಮಾಡಲು ನಿರ್ಬಂಧ ಹೇರಲಾಗಿದೆ. ಆದರೆ, ಕೆಲವೆಡೆ ಸಂಪ್ರದಾಯಿಕ ಆಚರಣೆಗಳಿಗೆ ಅವಕಾಶವಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ, ಜನರ ಭಾವನೆಗಳಿಗೆ ಅಡಚಣೆ ಆಗದಂತೆ ಕ್ರಮ ವಹಿಸಬೇಕಾಗುತ್ತದೆ. ಈ ವಿಚಾರದ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದು ಸೂಕ್ತ ಉತ್ತರ ಕೊಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೇದವ್ಯಾಸ ಕಾಮತ್, ‘ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಬ್ಬ, ಉತ್ಸವಗಳನ್ನು ಆಚರಣೆ ಮಾಡುವ ವೇಳೆ ಪೊಲೀಸರಿಂದ ವಿನಾಕಾರಣ ತೊಂದರೆಯಾಗುತ್ತಿದೆ. ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಧ್ವನಿ ವರ್ಧಕವನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 10 ಗಂಟೆ ನಂತರ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಪ್ರಶ್ನಿಸಿದರೆ ಕೋರ್ಟ್ ತೀರ್ಪು, ಸರಕಾರದ ಆದೇಶ ಎನ್ನುತ್ತಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಯಾವ ತೊಂದರೆಯೂ ಇರಲಿಲ್ಲ. ಕಾಂಗ್ರೆಸ್ ಸರಕಾರ ಬಂದ ನಂತರ ನಮ್ಮ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ. ಗಣೇಶೋತ್ಸವ, ನವರಾತ್ರಿ ಉತ್ಸವ ಬರುತ್ತಿದೆ. ಈ ಸಂದರ್ಭದಲ್ಲಿ ಆಚರಣೆಗೆ ಅಡ್ಡಿಯಾಗದಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಕಾಮತ್ ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಪಕ್ಷದ ಬಗ್ಗೆ ಮಾತನಾಡುವುದು ಬೇಡ, ಸರಕಾರ ಏನು ಕ್ರಮ ಕೈಗೊಳ್ಳಬೇಕೆಂದು ಹೇಳಿ. ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿಯಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸಂಪ್ರದಾಯ ಬದಲಿಸಲು ಆಗದು: ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ‘ಸದಸ್ಯರು ಪರಸ್ಪರ ಚರ್ಚೆ ಮಾಡುವುದು ಬೇಡ, ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಕಾನೂನು ಮತ್ತು ಸಂಪ್ರದಾಯ ಎರಡೂ ಇವೆ. ಇವೆರೆಡರ ನಡುವೆ ಪರಿಹಾರ ಕಂಡುಕೊಳ್ಳಬೇಕು. ಆರೋಪ-ಪ್ರತ್ಯಾರೋಪದಿಂದ ಪರಿಹಾರ ಸಿಗುವುದಿಲ್ಲ, ಅನಗತ್ಯ ಗೊಂದಲ ಬೇಡ. ಕಾನೂನು ಬದಲಾಯಿಸಬಹುದು, ಆದರೆ ಸಂಪ್ರದಾಯ ಬದಲಿಸಲು ಆಗದು’ ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಕಾನೂನು ಮತ್ತು ಸಂಪ್ರದಾಯ ಎರಡೂ ಇವೆ. ಕರಾವಳಿ ಭಾಗದಲ್ಲಿ ಭೂತಕೋಲ ಆರಂಭವಾಗುವುದೇ ರಾತ್ರಿ 10 ಗಂಟೆಯ ನಂತರ. ಗಣೇಶ ಹಬ್ಬ ಆಚರಣೆಯನ್ನು ರಸ್ತೆರಸ್ತೆಗಳಲ್ಲಿ ಮಾಡುತ್ತಾರೆ. ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಗಣೇಶಮೂರ್ತಿಯನ್ನು ವಶಕ್ಕೆ ಪಡೆದಿದ್ದರು. ಕೇವಲ ಬಿಜೆಪಿಯವರು ಆಚರಣೆ ಮಾಡುವುದಲ್ಲ. ಉರೂಸ್ ಆಚರಣೆಯನ್ನೂ ಮಾಡುತ್ತಾರೆ ಎಂದರು.
ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಡಾ.ಭರತ್ ಶೆಟ್ಟಿ, ‘ಸಂಭ್ರಮದಿಂದ ಆಚರಣೆ ಮಾಡಬೇಕಾದ ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಸಿಲುಕುವ ಸ್ಥಿತಿ ಹೆಚ್ಚಾಗುತ್ತದೆ. ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕೆಂಬ ಷರತ್ತನ್ನು ಪೊಲೀಸರು ಹಾಕುತ್ತಾರೆ. ಧ್ವನಿವರ್ಧಕಗಳನ್ನು ವಶಕ್ಕೆ ಪಡೆದರೆ ಹೇಗೆ?’ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿಯ ವಿ.ಸುನಿಲ್ ಕುಮಾರ್, ‘ಸರಕಾರಿ ಶಾಲೆ ಆವರಣದಲ್ಲಿ ಗಣೇಶೋತ್ಸವಕ್ಕೆ ಅವಕಾಶವಿಲ್ಲ’ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಬಹುತೇಕ ಕಡೆಗಳಲ್ಲಿ ಶಾಲಾ ಆವರಣದಲ್ಲೆ ಗಣೇಶ ಉತ್ಸವ ಆಚರಣೆ ನಡೆಸುವ ಸಂಪ್ರದಾಯವಿದ್ದು, ಹೀಗಾಗಿ ಸುತ್ತೋಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ, ‘ರಾತ್ರಿ 11 ಗಂಟೆ ನಂತರ ಆಝಾನ್ ಕೂಗುವುದನ್ನು ನಿಲ್ಲಿಸಬೇಕು, ಶಬ್ದಮಾಲಿನ್ಯ ಉಂಟಾಗುತ್ತದೆ ಎಂದು ಈ ಹಿಂದೆ ಬಿಜೆಪಿಯವರೇ ಆಗ್ರಹಿಸಿದ್ದರು. ಅದು ಧಾರ್ಮಿಕ ಆಚರಣೆಗೂ ಪಾಲನೆಯಾಗಬೇಕು. ಈ ವಿಚಾರ ಕಾನೂನು ಬಾಹಿರ. ಇಲ್ಲಿ ಈ ವಿಚಾರ ಚರ್ಚೆ ಮಾಡುವುದೇ ತಪ್ಪು’ ಎಂದರು.
ಆಗ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ‘ನಾವು ಕಾನೂನು ಪಾಲನೆ ಮಾಡುತ್ತೇವೆ. ಆಝಾನ್ ಕೂಗುವುದನ್ನು ನಿಲ್ಲಿಸಿ, ಕಾನೂನು ಗೌರವಿಸುವ ಸರಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಮಳವಳಿಯ ಯಾವ ಪ್ರಾರ್ಥನಾ ಮಂದಿರದಲ್ಲಿ ಆಝಾನ್ ಕೂಗಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿ ಎಂದು ಸವಾಲು ಹಾಕಿದರು.
‘ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನನಗೆ ಉತ್ತರ ಕೊಡುವುದು ಗೊತ್ತು ಎಂದು ನರೇಂದ್ರಸ್ವಾಮಿ ತಿರುಗೇಟು ನೀಡಿದರು. ಬಳಿಕ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಿಗೆ ಧಕ್ಕೆಯಾಗದಂತೆ ಸಂಪ್ರದಾಯ ಪಾಲಿಸಲು ಅವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿ ವಿಚಾರಕ್ಕೆ ತೆರೆ ಎಳೆದರು.