‘ಮತ ಕಳ್ಳತನ’ ದೇಶದ ಸೂಕ್ಷ್ಮ ವರ್ಗದವರ ಮೇಲಿನ ದಾಳಿ: ರಣದೀಪ್ ಸಿಂಗ್ ಸುರ್ಜೇವಾಲ
ಮತಗಳ್ಳತನ ವಿರುದ್ದ ಸಹಿ ಸಂಗ್ರಹ ಅಭಿಯಾನ
ಬೆಂಗಳೂರು: ‘ಮತ ಕಳ್ಳತನ’ದ ವಿರುದ್ದ ಪಕ್ಷದ ಎಲ್ಲ ಘಟಕಗಳು ಕ್ರಿಯಾಶೀಲವಾಗಿದ್ದು, ಜನಾಭಿಪ್ರಾಯ ರೂಪಿಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ದನಿಯಾಗದೇ ದೇಶದ ಜನಸಾಮಾನ್ಯರ ದನಿಯಾಗಿ ಇದು ರೂಪುಗೊಳ್ಳಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಇಂದಿಲ್ಲಿ ಕರೆ ನೀಡಿದ್ದಾರೆ.
ಶುಕ್ರವಾರ ಮತಗಳ್ಳತನ ವಿರುದ್ದ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮತ ಕಳ್ಳತನದಿಂದ ಈ ದೇಶದ ಮಹಿಳೆಯರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಎಸ್‍ಸಿ-ಎಸ್‍ಟಿ ವರ್ಗದ ಜನರು ಸೇರಿದಂತೆ ಸಮಾಜದ ಸೂಕ್ಷ್ಮ ವರ್ಗದವರ ಮೇಲಿನ ದಾಳಿ ಎನ್ನಬಹುದು. ಇದು ಕೇವಲ ಮತಕಳ್ಳತನ ಮಾತ್ರವಲ್ಲ, ಜನಸಾಮಾನ್ಯರ ಹಕ್ಕಿನ ಕಳ್ಳತನ’ ಎಂದು ವಿಶ್ಲೇಷಿಸಿದರು.
‘ಸಂವಿಧಾನದಲ್ಲಿ ಒಬ್ಬ ವ್ಯಕ್ತಿ ಒಂದು ಮತ ಎಂದು ಹೇಳಲಾಗಿದೆ. ಇಂದು ಸಂವಿಧಾನವನ್ನು ಮೀರಿ ಮತಕಳ್ಳತನ ಮಾಡಲಾಗುತ್ತಿದೆ. ನಮ್ಮ ಸಂವಿದಾನವನ್ನು ಎಲ್ಲರೂ ಒಟ್ಟಿಗೆ ಸೇರಿ ರಕ್ಷಿಸಿಕೊಳ್ಳಬೇಕಿದೆ. ಈ ದೇಶದಲ್ಲಿ ಹೊಸಕ್ರಾಂತಿಯ ಅಲೆಯನ್ನು, ಬದಲಾವಣೆಯನ್ನು ನಾವು-ನೀವೆಲ್ಲರೂ ಸೇರಿ ಮಾಡಬೇಕಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡಲು ಪ್ರೇರೆಪಿಸಬೇಕು ಎಂದರು.
ಬೆಂಗಳೂರಿನ ಪುಲಕೇಶಿ ನಗರದಲ್ಲಿ ಎದ್ದಿರುವ ದನಿ ಇಡೀ ದೇಶಕ್ಕೆ ಕೇಳಿಸಬೇಕು. ಮತಕಳ್ಳತನದ ಮೂಲಕ ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ನಾವೆಲ್ಲರೂ ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನವನ್ನ ರಕ್ಷಣೆ ಮಾಡಲು ಸೇರಿದ್ದೇವೆ. ಇಂದು ಸಂವಿಧಾನದ ಜೊತೆ ಜೊತೆಗೆ ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿದೆ. ಇದು ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವಲ್ಲ. ಈ ದೇಶದ ಜನ ಸಾಮಾನ್ಯರ ಸಂಘರ್ಷ ಎಂದು ಸುರ್ಜೇವಾಲ ನುಡಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಮತ ಕಳ್ಳತನ ವಿರೋಧಿ ಹೋರಾಟ ಕೇವಲ ರಾಜಕೀಯ ಉದ್ದೇಶದ ಹೋರಾಟವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ. ಜನರ ಮತಾಧಿಕಾರದ ರಕ್ಷಣೆಯ ಹೋರಾಟ. ಈ ದೇಶದ ಜನರು ತಮ್ಮ ಆಯ್ಕೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ ಎಂದರು.
ದೇಶದ ಪ್ರತಿಯೊಬ್ಬರ ಮತಗಳನ್ನೂ ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ಒಬ್ಬ ವ್ಯಕ್ತಿಯ ಮತ ಎರಡಾಗಿ ಬದಲಾಗುತ್ತಿದೆ. ಒಂದೊಂದು ಮನೆಯಲ್ಲಿ 50ಕ್ಕೂ ಹೆಚ್ಚು ಜನ ಮತದಾರರು ವಾಸವಿದ್ದಾರೆ. ಇಷ್ಟೊಂದು ಅಕ್ರಮದ ಹಿಂದೆ ಇರುವವರು ಬಿಜೆಪಿ ಪಕ್ಷದ ಜೊತೆ ನಿಂತಿದ್ದಾರೆ. ಈ ಅಕ್ರಮವನ್ನು ನಾವು ಪ್ರಶ್ನೆ ಮಾಡಬೇಕು. ಬಯಲಿಗೆ ಎಳೆಯಬೇಕು. ಅದಕ್ಕಾಗಿ ಬೃಹತ್ ಹೋರಾಟದ ಜೊತೆ-ಜೊತೆಯಲ್ಲಿ ಸಣ್ಣ ಸಣ್ಣ ಪ್ರಮಾಣದ ಜನಜಾಗೃತಿ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ ಎಂದು ಅವರು ತಿಳಿಸಿದರು.
‘ಪ್ರಜಾಪ್ರಭುತ್ವದ ಕಳ್ಳತನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು 5 ಕೋಟಿಗೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಿದೆ. ಮಹದೇವಪುರ ಹಾಗೂ ಆಳಂದ ಕ್ಷೇತ್ರದಲ್ಲಿ ಮತಕಳ್ಳತನ ನಡೆದಂತೆ ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ನಡೆಯುತ್ತಿದೆ. ಪ್ರತಿಯೊಬ್ಬರನ್ನು ರಕ್ಷಿಸುತ್ತಿರುವುದು ನಮ್ಮ ಸಂವಿಧಾನ. ನೆಹರು, ಪಟೇಲ್, ಬಾಬುರಾಜೇಂದ್ರ ಪ್ರಸಾದ್, ಮೌಲಾನಾ ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದಿಂದ ಈ ದೇಶ ನಿರ್ಮಾಣವಾಗಿದೆ. ಇಂತಹ ಪವಿತ್ರ ದೇಶವನ್ನ ಲೂಟಿಕೋರರಿಂದ ರಕ್ಷಿಸಲು ಪಣ ತೊಡಬೇಕು’
-ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಉಸ್ತುವಾರಿ