ದೇವಸ್ಥಾನವನ್ನು ತೊಳೆಯುವ ಬದಲು ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ : ಈಶ್ವರಾನಂದಪುರಿ ಸ್ವಾಮೀಜಿ
ಚಿತ್ರದುರ್ಗ: ಬಾಗೂರು ಗ್ರಾಮದಲ್ಲಿರುವ ಚನ್ನಕೇಶವ ದೇವಸ್ಥಾನದಲ್ಲಿ ನಮಗೆ ಜಾತಿ ಕಾರಣಕ್ಕೆ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ನಾವು ಹೋಗಿದ್ದೆವೆಂಬ ಕಾರಣಕ್ಕೆ ದೇವಾಲಯವನ್ನು ಸ್ವಚ್ಛಗೊಳಿಸಿದ್ದರು ಎಂದು ಹೊಸದುರ್ಗ ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಣೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ 'ಪರಿವರ್ತನೆಯ ಹಾದಿಯಲ್ಲಿ ಮಠಗಳು' ಗೋಷ್ಠಿಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು.
‘ಆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ಮೊದಲೇ ಗೊತ್ತಿದ್ದರೆ ಕನಕದಾಸರಂತೆ ನಾವು ಕೂಡ ಪ್ರತಿಭಟನೆ ಮಾಡಿ ದೇವಾಸ್ಥಾನವನ್ನು ಪ್ರವೇಶಿಸುತ್ತಿದ್ದೆವು. ಆದರೆ, ಆ ವಿಷಯ ನಂತರ ತಿಳಿಯಿತು. ದೇವಸ್ಥಾನವನ್ನು ತೊಳೆಯುವ ಬದಲು ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ’ ಎಂದು ಹೇಳಿದರು.
‘ವೈಕುಂಠ ಏಕಾದಶಿಯಂದು ದೇವಸ್ಥಾನದ ಆಹ್ವಾನದ ಮೇರೆಗೆ ನಾವು, ಶಾಂತವೀರ ಸ್ವಾಮೀಜಿ ಅಲ್ಲಿಗೆ ಹೋಗಿ, ದೇವಸ್ಥಾನದ ದ ಗರ್ಭಗುಡಿಯ ಪ್ರಾಂಗಣದಲ್ಲಿ ನಿಂತಿದ್ದೆವು. ಗರ್ಭಗುಡಿಗೆ ನಮ್ಮ ಪ್ರವೇಶವನ್ನು ತಡೆದರು. ಆದರೆ, ಅರ್ಚಕರ ಕುಟುಂಬದ ಹೆಣ್ಣುಮಕ್ಕಳಿಗೆ ಅವಕಾಶ ಕಲ್ಪಿಸಿದರು. ಮಠಾಧೀಶರಿಗೆ ಹೀಗಾದರೆ ಹೇಗೆ? ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಹೋಗುವುದಿಲ್ಲ’ ಎಂದರು.
‘ಕರ್ನಾಟಕದ ಪರಂಪರೆಯಲ್ಲಿ ಮಠಗಳ ಪಾತ್ರ ಬಹಳ ದೊಡ್ಡದಾಗಿದ್ದು, ಹಿಂದಿನಿಂದಲೂ ವೀರಶೈವ ಲಿಂಗಾಯತ ಮಠಗಳು ತಳ ಸಮುದಾಯಗಳ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬೆಳೆಸಿವೆ’ ಎಂದು ಹೇಳಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಮೀಸಲಾತಿ ಕೇಳಬೇಕಾದವರು ಸುಮ್ಮನಿದ್ದಾರೆ. ಆದರೆ, ಇಂದು ಉಳ್ಳವರೇ ಮೀಸಲಾತಿ ಕೇಳುತ್ತಿದ್ದಾರೆ. ಮೀಸಲಾತಿಗಾಗಿ ಉಳ್ಳವರು ಮತ್ತು ಬಡವರ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ’ ಎಂದು ಹೇಳಿದರು.