ಕಾಂಗ್ರೆಸ್ ಸರಕಾರ ಬರದಿಂದ ನೊಂದ ಜನರಿಗೆ ಏನು ಮಾಡಿದೆ : ಎಚ್.ಡಿ.ಕುಮಾರಸ್ವಾಮಿ
Update: 2024-04-27 19:43 IST
Photo : x/@hd_kumaraswamy
ಬೆಂಗಳೂರು : ಬರ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯ ಬಗ್ಗೆ ಕೇಂದ್ರ ಸರಕಾರದ ಕಡೆ ಕೈ ತೋರಿಸುವ ಕಾಂಗ್ರೆಸ್ ಸರಕಾರ ಬರದಿಂದ ನೊಂದಿರುವ ಜನರಿಗೆ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ 3,454 ಕೋಟಿ ಪರಿಹಾರ ನೀಡಿದೆ. ಕಡಿಮೆ ಬಂದಿದೆ ಎಂದರೆ ಕೇಳಲಿ, ಅದು ಬಿಟ್ಟು ರಾಜಕೀಯ ಮಾಡಿಕೊಂಡಿದ್ದರೆ ಉಪಯೋಗವೇನು? ಎಂದರು.
ಹಣ ಬಿಡುಗಡೆ ಮಾಡುವಾಗ ಎಲ್ಲ ಅಂಶಗಳನ್ನು ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಹಣ ಸಾಕಾಗಲಿಲ್ಲ ಎಂದರೆ ಇವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆ ಎನ್ನುವುದು ಇದೆಯಲ್ಲ. 15ನೇ ಹಣಕಾಸಿನ ಆಯೋಗದ ಶಿಫಾರಸಿನ ಹಿನ್ನಲೆಯಲ್ಲಿ ಹಣ ಬರುತ್ತದೆ. ರಾಜ್ಯದಲ್ಲಿ ತೀವ್ರ ಬರವಿದೆ, ಅದಕ್ಕೆ ರಾಜ್ಯ ಸರಕಾರ ಏನು ಮಾಡಿದೆ ಎಂದು ಕೇಳಿದರು.