ಮಹಿಳೆಯರು ಉದ್ಯೋಗಿಗಳಷ್ಟೇ ಅಲ್ಲ, ಉದ್ಯೋಗದಾತರೂ ಆಗಿದ್ದಾರೆ: ಡಿ.ಕೆ. ಶಿವಕುಮಾರ್
ಮಹಿಳೆಯರಿಗಾಗಿ ವಿಶೇಷ ಎಂಎಸ್‍ಎಂಇ ನೀತಿ ಜಾರಿ: ಘೋಷಣೆ
Photo credit:X/@DKShivakumar
ಬೆಂಗಳೂರು: ಇಂದು ಮಹಿಳೆಯರು ಉದ್ಯೋಗಿಗಳಾಗಿ ಅಷ್ಟೇ ಉಳಿದಿಲ್ಲ, ಬದಲಿಗೆ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸುವವರಾಗಿದ್ದಾರೆ. ಮಹಿಳಾ ಉದ್ಯಮಿಗಳ ಬೆಳವಣಿಗೆಗೆ ಬೆಂಬಲ ನೀಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಉಬುಂಟು ಒಕ್ಕೂಟದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಗಳು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಮತ್ತು ಅವರಿಗೆ ನಿರಂತರ ಸರಕಾರದ ಬೆಂಬಲ ದೊರೆಯಬೇಕು ಎಂದರು.
ನಾವು ಉದ್ಯೋಗಿಗಿಂತ ಮೊದಲು ಉದ್ಯೋಗದಾತರನ್ನು ಬೆಳೆಸಬೇಕು. ಮಹಿಳಾ ಉದ್ಯಮಿಗಳು ಕೈಗಾರಿಕೆಗಳು ಮತ್ತು ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ. ‘ಒಟ್ಟಿಗೆ ಸೇರುವುದು ಒಂದು ಆರಂಭ, ಒಟ್ಟಿಗೆ ಯೋಚಿಸುವುದು ಪ್ರಗತಿ, ಮತ್ತು ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು’ ಎಂದು ಡಿ.ಕೆ.ಶಿವಕುಮಾರ್ ಅವರು ಉಬುಂಟು ಒಕ್ಕೂಟದ ಧ್ಯೇಯವಾಕ್ಯವನ್ನು ಉಲ್ಲೇಖಿಸಿದರು.
ಕರ್ನಾಟಕದಲ್ಲಿ ಐ.ಟಿ. ವಲಯದಲ್ಲಿ ಶೇ.50ರಷ್ಟು ಎಂಜಿನಿಯರ್‍ಗಳು ಮತ್ತು ವೈದ್ಯಕೀಯ ವಲಯದಲ್ಲಿ ಶೇ.37ರಷ್ಟು ಮಹಿಳೆಯರಾಗಿದ್ದಾರೆ. ಆದರೆ ಪ್ಯಾರಾಮೆಡಿಕಲ್ ಕಾರ್ಯಕರ್ತರಲ್ಲಿ ಶೇ.80ರಷ್ಟು ಮತ್ತು ಹೋಟೆಲ್ ಉದ್ಯಮದ ಉದ್ಯೋಗಿಗಳಲ್ಲಿ ಶೇ.60ರಷ್ಟು ಮಹಿಳೆಯರಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಸಣ್ಣ ಕೈಗಾರಿಕೆ ಇಲಾಖೆಯ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ರಾಜ್ಯ ಸರಕಾರವು ಶೀಘ್ರದಲ್ಲೇ ಒಂದು ವಿಶೇಷ ಎಂಎಸ್‍ಎಂಇ ನೀತಿಯನ್ನು ಪರಿಚಯಿಸಲಿದೆ ಮತ್ತು ಸದೃಢ ಮಹಿಳಾ ಕೇಂದ್ರಿತ ಕೈಗಾರಿಕಾ ನೀತಿಯನ್ನು ತರಲು ನಾವು ಉಬುಂಟು ಒಕ್ಕೂಟದಿಂದ ಶಿಫಾರಸುಗಳನ್ನು ಪಡೆಯುತ್ತೇವೆ ಎಂದು ಘೋಷಿಸಿದರು.
ಶ್ರೇಣಿ-ಎರಡು ಮತ್ತು ಶ್ರೇಣಿ-ಮೂರು ನಗರಗಳ ಉದ್ಯಮಿಗಳನ್ನು ತಲುಪುವ ಉಬುಂಟುವಿನ ಪ್ರಯತ್ನಗಳು ಸಮಗ್ರ ಬೆಳವಣಿಗೆಯ ಕಡೆಗೆ ಬಲವಾದ ಬದ್ಧತೆಯನ್ನು ತೋರಿಸುತ್ತವೆ. 2027ರ ವೇಳೆಗೆ 10 ಸಾವಿರ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ತರಬೇತಿ ನೀಡುವ ಉಬುಂಟು ಒಕ್ಕೂಟದ ಡಿಜಿಟಲ್ ಸಾಕ್ಷರತಾ ಉಪಕ್ರಮವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಶ್ಲಾಘಿಸಿದರು.
ಮಹಿಳಾ ನೇತೃತ್ವದ ಸ್ಟಾರ್ಟ್‍ಅಪ್‍ಗಳು ಭಾರತದ ಆರ್ಥಿಕತೆಯನ್ನು ಬಲಪಡಿಸುತ್ತಿವೆ. ಜಾಗತಿಕ ಮಹಿಳಾ ಉದ್ಯಮಿ ಸೂಚ್ಯಂಕದಲ್ಲಿ ಭಾರತವು ಏಳನೇ ಸ್ಥಾನದಲ್ಲಿದೆ, ಶೇ.20ರಷ್ಟು ಮಹಿಳಾ ಉದ್ಯಮಿಗಳು ಜಿಡಿಪಿಗೆ ಶೇ.17ರಷ್ಟು ಕೊಡುಗೆ ನೀಡುತ್ತಿದ್ದಾರೆ. ನಾವು ಮಹಿಳಾ ನೇತೃತ್ವದ ಕೈಗಾರಿಕೆಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಶರಣಬಸಪ್ಪ ದರ್ಶನಾಪುರ ಹೇಳಿದರು.
ಉಬುಂಟು ಸಂಸ್ಥಾಪಕಿ ಹಾಗೂ ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮಾತನಾಡಿ, ಉಬುಂಟು ಒಕ್ಕೂಟವು ರಾಜ್ಯಾದ್ಯಂತ ಮಹಿಳೆಯರಿಗೆ ಬಲವಾದ ಬೆಂಬಲ ಜಾಲವಾಗಿ ವಿಕಸನಗೊಂಡಿದೆ. ನಾವು ಉಬುಂಟುವನ್ನು ಪರಸ್ಪರ ಬೆಂಬಲಿಸುವ ಮಹಿಳಾ ಬ್ಯಾಂಕ್‍ನಂತೆ ಅಭಿವೃದ್ಧಿಪಡಿಸಬಹುದು ಎಂದರು.
ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಉದ್ಯಮ ವಿಕಾಸಿನಿ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಎಫ್‍ಕೆಸಿಸಿಐ(ಕರ್ನಾಟಕ)ದ ಮೊದಲ ಮಹಿಳಾ ಅಧ್ಯಕ್ಷೆ ಉಮಾರೆಡ್ಡಿ ಮತ್ತು ಜಿಸಿಸಿಐ (ಗೋವಾ)ದ ಮೊದಲ ಮಹಿಳಾ ಅಧ್ಯಕ್ಷೆ ಪ್ರತಿಮಾ ಧೋಂಡ್ ಅವರಿಗೆ ಪ್ರದಾನ ಮಾಡಲಾಯಿತು. ಹಿಡನ್ ಉಬುಂಟು ಜೆಮ್ಸ್ ಪ್ರಶಸ್ತಿಯನ್ನು ಬೆಳಗಾವಿಯ ರವೀಂದ್ರ ಎನರ್ಜಿ ಲಿಮಿಟೆಡ್‍ನ ಕಾರ್ಯಕಾರಿ ಅಧ್ಯಕ್ಷೆ ವಿದ್ಯಾ ಎಂ. ಮುಕುರ್ಂಬಿ ಅವರಿಗೆ ನೀಡಲಾಯಿತು.