×
Ad

ಅಮಾಯಕ ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ‌ʼಎಕ್ಸ್ʼ ಅಭಿಯಾನ: ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ

Update: 2025-06-01 14:24 IST

ಬೆಂಗಳೂರು: ಸಂಘಪರಿವಾರದ ದುಷ್ಕರ್ಮಿಗಳಿಂದ ನಡೆದ ಮಂಗಳೂರಿನ ಬಂಟ್ವಾಳದ ಅಮಾಯಕ ಯುವಕ ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಶನಿವಾರ ಸಂಜೆ 5ಕ್ಕೆ ಹಮ್ಮಿಕೊಂಡಿದ್ದ ಎಕ್ಸ್ (ಟ್ವಿಟ್ಟರ್) ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಟ್ವಿಟ್ಟರ್ ಅಭಿಯಾನದಡಿ ಸಾವಿರಾರು ಪೋಸ್ಟ್ ಗಳನ್ನು ಮಾಡಲಾಗಿದ್ದು, 12 ಲಕ್ಷಕ್ಕೂ ಹೆಚ್ಚು ಮಂದಿಗೆ ಇದು ತಲುಪುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

'ಕೋಸ್ಟಲ್ ಬ್ರದರ್ಸ್'ನಡಿ ನಡೆದ ಈ ಟ್ವಿಟರ್ ಅಭಿಯಾನಕ್ಕೆ ಸಾವಿರಾರು ಮಂದಿ ಜಾತ್ಯಾತೀತ ನಿಲುವುಳ್ಳ, ಸೌಹಾರ್ದತೆ ಬಯಸುವ ಜನ ಕೈಜೋಡಿಸಿದ್ದಾರೆ.

#CoastalKarnataka, #MuslimsLivesMatters ಹ್ಯಾಷ್‌ಟ್ಯಾಗ್‌ನಡಿ ಎಕ್ಸ್‌ ನಲ್ಲಿ ಟ್ರೆಂಡಿಂಗ್ ಆಗಿದೆ.

ಬಂಟ್ವಾಳ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಪಿಕ್‌ಅಪ್ ಚಾಲಕ ಅಬ್ದುಲ್ ರಹ್ಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿಯ ಕೊಲೆಯತ್ನ ಪ್ರಕರಣವನ್ನು ಖಂಡಿಸಿ, ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಭೀಕರವಾಗಿ ಕೊಲೆಗೈದ ಕೋಮುವಾದಿ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸುವ ಜೊತೆಗೆ ಈ ಕೊಲೆಗೆ ಪ್ರಚೋದನೆ ನೀಡಿದ ನಾಯಕರನ್ನೂ ಬಂಧಿಸುವಂತೆ ಒತ್ತಾಯಿಸಿ ಈ ಟ್ವಿಟ್ಟರ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ತನ್ನ ತಂದೆಗೆ ರಕ್ತ ನೀಡುವ ಮೂಲಕ ಮಾನವೀಯತೆ, ಸೌಹಾರ್ದತೆ ಮೆರೆದಿದ್ದ ಅಬ್ದುಲ್ ರಹ್ಮಾನ್ ಅವರನ್ನು ಕೊಲೆಗಡುಕ ದೀಪಕ್ ಮನೆಗೆ ಕರೆಯಿಸಿ ಬರ್ಬರವಾಗಿ ಹತ್ಯೆ ಮಾಡಿ ಭಯೋತ್ಪಾದಕ ಕೃತ್ಯವನ್ನು ಎಸಗಿದ್ದಾನೆ. ಇದು ನಡೆದಿರುವುದು ಕೇವಲ ಮುಸ್ಲಿಂ ಎಂಬ ಕಾರಣಕ್ಕೆ! ಇಷ್ಟು ದೊಡ್ಡ ಪ್ರಮಾಣದಲ್ಲಿ ದ್ವೇಷ ಬಿತ್ತಿದವರ ವಿರುದ್ಧ ಕ್ರಮ ಯಾವಾಗ? ಎಂಬುದನ್ನು ಜನರು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.

ಕರಾವಳಿಯ ದೇವಸ್ಥಾನ, ದೈವಸ್ಥಾನ, ಶೋಭಾಯಾತ್ರೆಗೆ ತನ್ನ ಸೌಹಾರ್ದತೆಯ ಅಳಿಲು ಸೇವೆ ನೀಡಿದ್ದ ಅಬ್ದುಲ್ ರಹ್ಮಾನ್, ಕೊಲೆಗಾರನ ತಂದೆಯ ಜೀವ ಉಳಿಸುವ ಜೊತೆಗೆ ಮನೆ ಕಟ್ಟಲು ನೆರವಾಗಿದ್ದ. ಅಂಥ ಅಮಾಯಕ ವ್ಯಕ್ತಿಯನ್ನು ಕೇವಲ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಕೋಮುವಾದಿಗಳು ಕೊಲೆಗೈದಿರುವುದು ಮಾನವ ಕುಲವನ್ನೇ ನಾಚುವಂತೆ ಮಾಡಿದೆ. ಇಂಥ ಕೋಮುವಾದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ಜನರು  ಒತ್ತಾಯಿಸಿದ್ದಾರೆ.

ಕಾಂಗ್ರೆಸ್ಸಿನ ರಾಷ್ಟ್ರೀಯ ಹಾಗು ರಾಜ್ಯ ನಾಯಕರನ್ನು, ಖ್ಯಾತ ಪತ್ರಕರ್ತ ರವೀಶ್ ಕುಮಾರ್, ಅಭಿಸಾರ್ ಶರ್ಮ, ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, Alt-Newsನ ಮೊಹಮ್ಮದ್ ಝುಭೇರ್ ಸೇರಿದಂತೆ ಹಲವರನ್ನು ಈ ಟ್ವಿಟ್ಟರ್ ಅಭಿಯಾನಕ್ಕೆ ಟ್ಯಾಗ್ ಮಾಡಲಾಗಿದೆ.

ಕಾಂಗ್ರೆಸ್ ನಾಯಕರಾದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ (ಸಂಘಟನೆ) ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ (ಕರ್ನಾಟಕ ಉಸ್ತುವಾರಿ), ಕಾಂಗ್ರೆಸ್ ನಾಯಕ ಶಾಯರ್ ಇಮ್ರಾನ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಪ್ರಿಯಾಂಕಾ ಖರ್ಗೆ, ಝಮೀರ್ ಅಹ್ಮದ್, ANI, Aajtak, ABPNews ,Republic, TimesNow,Times of India, ಸೇರಿದಂತೆ ಹತ್ತಲವು ಟಿವಿ, ಪತ್ರಿಕೆಗಳನ್ನು ಟ್ವಿಟ್ಟರ್ ಅಭಿಯಾನದಡಿ ಟ್ಯಾಗ್ ಮಾಡಲಾಗಿದೆ.

ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಅಮಾಯಕ ಬಂಟ್ವಾಳದ ಅಬ್ದುಲ್ ರಹ್ಮಾನ್ ಅವರನ್ನು ಅವರ ಪರಿಚಯಸ್ಥರೇ ಮೋಸದಿಂದ ಮನೆಗೆ ಕರೆಯಿಸಿ ಹತ್ಯೆ ಮಾಡುವ ಮಟ್ಟಿಗೆ ಕರಾವಳಿಯಲ್ಲಿ ಮತೀಯ ದ್ವೇಷ ಬಿತ್ತಿರುವ ಸಂಘಪರಿವಾರ ಹಾಗು ಅದರ ನಾಯಕರಿಗೆ ಕಠಿಣ ಕಾನೂನು ಕ್ರಮ ಜರಗಿಸುವ ಮೂಲಕ ಮುಂದೆ ಕರಾವಳಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಜೀವಿಸುವಂಥ ವಾತಾವರಣ ಸೃಷ್ಟಿಸುವಂತೆ ಜನರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News