×
Ad

ಸ್ವೀಡನ್: ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಗುಂಡಿನ ದಾಳಿ: ಕನಿಷ್ಠ 10 ಮಂದಿ ಮೃತ್ಯು

Update: 2025-02-05 07:58 IST

PC: x.com/FOX9

ಒರೆಬ್ರೊ, ಸ್ವೀಡನ್: ಕೇಂದ್ರ ಸ್ವೀಡನ್ ನ ಒರೆಬ್ರೊ ನಗರದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಪ್ರಕಟಿಸಿದ್ದಾರೆ.

ಸ್ವಿಡೀಶ್ ಪ್ರಧಾನಿ ಉಲ್ಫ್ ಕ್ರಿಸ್ಟೆರ್ಸನ್ ಈ ಘಟನೆಯನ್ನು "ದೇಶದ ಇತಿಹಾಸದಲ್ಲೇ ಕರಾಳ ದಾಳಿ" ಎಂದು ಬಣ್ಣಿಸಿದ್ದಾರೆ. "ಸ್ವೀಡನ್ ನ ಇತಿಹಾಸದಲ್ಲೇ ಇದು ಅತ್ಯಂತ ಭಯಾನಕ ದಾಳಿ. ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ನಾನು ಉತ್ತರ ನೀಡುವ ಸ್ಥಿತಿಯಲ್ಲೂ ಇಲ್ಲ. ಆದರೆ ಏನು ನಡೆಯಿತು, ಹೇಗೆ ನಡೆಯಿತು, ಇದರ ಹಿಂದಿನ ಉದ್ದೇಶವೇನು ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ. ಯಾರೂ ವದಂತಿಗಳಿಗೆ ಕಿವಿ ಕೊಡುವುದು ಬೇಡ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಸ್ವೀಡನ್ ಪೊಲೀಸರ ಪ್ರಕಾರ, ಶೂಟಿಂಗ್ ನಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ದೊಡ್ಡ ಪ್ರಮಾಣದ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶಕ್ಕೆ ಜನ ಭೇಟಿ ನೀಡದಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

"ನಾಲ್ಕು ಮಂದಿಗೆ ಗುಂಡೇಟು ತಗುಲಿದೆ. ಐದನೇ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ. ಎಷ್ಟು ಮಂದಿಗೆ ಗಾಯಗಳಾಗಿವೆ ಎನ್ನುವುದು ಅಸ್ಪಷ್ಟ. ಕಾರ್ಯಾಚರಣೆ ಮುಂದುವರಿದಿದೆ" ಎಂದು ಘಟನೆ ನಡೆದ ತಕ್ಷಣವೇ ಪೊಲೀಸರು ಬಹಿರಂಗಪಡಿಸಿದ್ದರು.  ಹಲವು ಮಂದಿ ಪೊಲೀಸರು, ಹಲವು ಆ್ಯಂಬುಲೆನ್ಸ್ ಗಳು ಮತ್ತು ತುರ್ತು ವಾಹನಗಳು ಘಟನಾ ಸ್ಥಳದಲ್ಲಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News